ಕುರಿ-ಮೇಕೆ ಸಾಕಾಣಿಕೆದಾರರಿಗೆ 100 ಕೋಟಿ ರೂ.ಸಾಲ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2018-09-10 14:28 GMT

ಬೆಂಗಳೂರು, ಸೆ.10: ರಾಜ್ಯದಲ್ಲಿ ಇರುವ ಎಲ್ಲ ಪಿಎಲ್‌ಡಿ ಬ್ಯಾಂಕುಗಳ ಮೂಲಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ 100 ಕೋಟಿ ರೂ.ಸಾಲವನ್ನು ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದರು.

ಸೋಮವಾರ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ರೈತರ ಪರವಾಗಿದ್ದು, ಈಗಾಗಲೆ ರೈತರ 47 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದೆ. ಅದೇ ರೀತಿ ರೈತರ ಉಪಕಸುಬಾದ ಕುರಿ ಮತ್ತು ಮೇಕೆ ಸಾಕಾಣಿಕೆ ಲಾಭದಾಯಕವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಎಲ್ಲ ಪಿಎಲ್‌ಡಿ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ನೀಡಲು ಸರಕಾರ ಮುಂದಾಗಿದೆ ಎಂದು ಅವರು ಹೇಳಿದರು.

ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ, ಈ ಉಪಕಸುಬಿನ ಉತ್ತೇಜನಕ್ಕಾಗಿ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದನ್ನು ಸೂಕ್ತ ರೀತಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಅದರ ಜಾರಿಗೆ ಹಾಗೂ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಕುರಿ ಮತ್ತು ಮೇಕೆ ಮಾಂಸಕ್ಕೆ ಯಾವ ರೀತಿ ಬೇಡಿಕೆ ಇದೆಯೋ, ಅದೇ ರೀತಿ ಅದರ ಉಣ್ಣೆಗೂ ಬೇಡಿಕೆ ಇದೆ. ರೇಮಾಂಡ್ ಉಣ್ಣೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಸರಿದ್ದು, ಅದೇ ರೀತಿ ನಮ್ಮ ರಾಜ್ಯದ ಉಣ್ಣೆಗೂ ಜಾಗತಿಕ ಬೇಡಿಕೆ ಬರುವಂತೆ ಇಲ್ಲಿಯೇ ಅದರ ಬಟ್ಟೆಗಳನ್ನು ತಯಾರು ಮಾಡಲು ಸಂಘಗಳು ಮುಂದೆ ಬಂದರೆ, ಸರಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಮಹಾಮಂಡಳದ ಪದಾಧಿಕಾರಿಗಳು ಹಾಗೂ ರಾಜ್ಯದ ನಾನಾ ಭಾಗಗಳಿಂದ ಬಂದ ಕುರಿತು ಮತ್ತು ಮೇಕೆ ಸಾಕಾಣಿಕೆದಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News