ತೈಲ ದರದ ಮೇಲಿನ ಸುಂಕ ಶೇ.50ರಷ್ಟು ಕಡಿತಗೊಳಿಸಲು ಎಐಟಿಯುಸಿ ಆಗ್ರಹ

Update: 2018-09-10 14:35 GMT

ಬೆಂಗಳೂರು, ಸೆ. 10: ತೈಲ ದರದ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಶೇ.50ರಷ್ಟು ಕಡಿತಗೊಳಿಸಿ, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರವನ್ನು 2014ರಲ್ಲಿದ್ದ ಸ್ಥಿತಿಗೆ ಮರಳಿ ತರಬೇಕು ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಆಗ್ರಹಿಸಿದ್ದಾರೆ.

ಸೋಮವಾರ ತೈಲ ದರ ಏರಿಕೆ ಮಾಡಿರುವ ಕೇಂದ್ರದ ನೀತಿಗಳ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರತಿದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಮುಖಿ ಯಾಗಿದ್ದು, ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೀಡುಮಾಡಿದೆ ಎಂದು ದೂರಿದರು.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಕೇಂದ್ರ ಸರಕಾರ ಜನತೆಯ ಮೇಲೆ ಹೊರೆ ಹೊರಿಸಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಅತ್ಯಂತ ಕಡಿಮೆ ಬೆಲೆ ಇದೆ. ಪೆಟ್ರೋಲ್ ಮತ್ತು ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕವು ಕ್ರಮವಾಗಿ ಶೇ.205 ಮತ್ತು ಶೇ. 430ರಷ್ಟು ಹೆಚ್ಚಾಗಿದ್ದು ಇದರಿಂದಾಗಿ ಕೇಂದ್ರಕ್ಕೆ ನೇರವಾಗಿ 7ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ಲಭಿಸಿದೆ. ಮತ್ತೊಂದು ಕಡೆ ಮೋದಿ ಸರಕಾರವು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಲ್ಲಿನ 2.2ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಕಾರ್ಪೊರೇಟ್ ಸಾಲಮನ್ನಾ ಮಾಡುತ್ತಲೇ, ತೈಲ ದರ ಏರಿಕೆಯ ಮೂಲಕ ಜನರ ಮೇಲೆ ಹೊರೆ ಹೊರಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕುಸಿದ ಜಿಡಿಪಿ ಬೆಳವಣಿಗೆ ದರದಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಬೆಲೆ ತೆತ್ತ ದೇಶದ ಅತಿದೊಡ್ಡ ಆರ್ಥಿಕ ವಿಪತ್ತಾದ ನೋಟುಗಳ ಅಮಾನ್ಯೀಕರಣದ ಜೊತೆಗೆ ತರಾತುರಿಯಲ್ಲಿ ಜಾರಿಯಾದ ಜಿಎಸ್‌ಟಿ ಕೇಂದ್ರ ಸರಕಾರವನ್ನು ಬಾಧಿಸಿದ್ದು, ಅದು ಜನಸಾಮಾನ್ಯರನ್ನು ಶಿಕ್ಷಿಸುತ್ತಿದೆ. ಕೇಂದ್ರ ಸರಕಾರ ಕೂಡಲೇ ತೈಲ ದರದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿ, ಪೆಟ್ರೋಲ್, ಡಿಸೇಲ್ ದರ ಮತ್ತು ಅಡುಗೆ ಅನಿಲ ದರವನ್ನು ಇಳಿಕೆ ಮಾಡಬೇಕು. ಆ ಮೂಲಕ ಅಗತ್ಯ ವಸ್ತುಗಳನ್ನು ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾಗಬೇಕು. ಇಲ್ಲವಾದರೆ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News