ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸೆ.13 ರಂದು ಕೇಂದ್ರದ ತಂಡ ಭೇಟಿ

Update: 2018-09-10 14:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ/ಬೆಂಗಳೂರು, ಸೆ. 10: ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆ ವಿವಿಧ ಪ್ರದೇಶಗಳಿಗೆ ಕೇಂದ್ರದ ಉನ್ನತ ಮಟ್ಟದ ತಂಡವು ಸೆ.12ರಂದು ಬೆಂಗಳೂರಿಗೆ ಆಗಮಿಸಲಿದ್ದು, ಸೆ.13ಕ್ಕೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದಲ್ಲಿ 6 ಸದಸ್ಯರ ತಂಡವು ಸೆ.12 ರಂದು ಬೆಂಗಳೂರಿಗೆ ಆಗಮಿಸುತ್ತಿದೆ. ಈ ತಂಡದ ಮೂವರು ಸದಸ್ಯರು ಕೊಡಗಿಗೆ ಭೇಟಿ ನೀಡಲಿದ್ದು, ಉಳಿದ ಮೂವರು ಸದಸ್ಯರು ದಕ್ಷಿಣ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಿಗೆ ತೆರಳಲಿದ್ದಾರೆ.

ಈ ಸದಸ್ಯರು ಎಲ್ಲ ಜಿಲ್ಲೆಗಳಲ್ಲೂ ನೆರೆಪೀಡಿತ ಪ್ರದೇಶಗಳಿಗೆ ತೆರಳಿ, ಆಗಿರುವ ಹಾನಿಯನ್ನು ಅವಲೋಕಿಸಲಿದ್ದಾರೆ. ಬಳಿಕ, ಸೆ.14ರಂದು ಕೇಂದ್ರ ತಂಡವು ರಾಜ್ಯ ಸರಕಾರದ ಸಚಿವರುಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ನೆರೆಹಾನಿ ಕುರಿತು ವಿಚಾರ ವಿನಿಮಯ ನಡೆಸಲಿದೆ. ಬಳಿಕ ಈ ತಂಡವು ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು (ಸೆ.10) ಹೊಸದಿಲ್ಲಿಗೆ ತೆರಳಿದ್ದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿ, ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ತನ್ನ ಈ ತಂಡವನ್ನು ರವಾನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News