ಪೊಲೀಸ್ ಠಾಣೆಗಳು ಸೆಟ್ಲ್‌ಮೆಂಟ್ ಅಡ್ಡಗಳಾಗಿವೆ: ಹೈಕೋರ್ಟ್ ಕಿಡಿ

Update: 2018-09-10 15:28 GMT

ಬೆಂಗಳೂರು, ಸೆ.10: ಉದ್ಯಮಿಗಳಿಬ್ಬರ ಷೇರು ಹಂಚಿಕೆ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪೊಲೀಸರು ತಮ್ಮನ್ನು ತಾವೆ ಕಾನೂನು ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದೆ.       

ಬಸವನಗುಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಕೋರಿ ಡಿ.ವೆಂಕಟೇಶ್ ಗುಪ್ತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್‌ ಕುಮಾರ್ ಅವರಿದ್ದ ನ್ಯಾಯಪೀಠ, ಡಿಸಿಪಿಯಾಗಿರುವ ನೀವು ಈ ಷೇರ್ ಹಂಚಿಕೆ ವಿಚಾರದಲ್ಲಿ ಎಸ್‌ಐಗೆ ಪತ್ರ ಬರೆದು ಪ್ರಕರಣ ದಾಖಲಿಸಲು ಯಾಕೆ ಹೇಳಿದಿರಿ. ವಾಸ್ತವದಲ್ಲಿ ಅಪರಾಧ ಕೃತ್ಯ ನಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ನೀವೇ ಠಾಣೆಯಲ್ಲಿ ಸೆಟ್ಲ್‌ಮೆಂಟ್ ಮಾಡಲು ನಿಮಗೆ ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದೆ.

ಪೊಲೀಸರು ತಮ್ಮನ್ನು ತಾವು ಕಾನೂನು ಎಂದುಕೊಂಡಿದ್ದು, ಗೌರವದಿಂದ ಬದುಕುತ್ತಿರುವ ನಾಗರಿಕರಿಗೆ ಕಿರುಕುಳ, ಮಾನ ಮರ್ಯಾದೆ ತೆಗೆಯುತ್ತಿದ್ದಾರೆ. ಇಂತಹ ನಡವಳಿಕೆಯನ್ನು ಹೈಕೋರ್ಟ್ ಸಹಿಸುವುದಿಲ್ಲ. ಅಲ್ಲದೆ, ಕರ್ನಾಟಕ ರಾಜ್ಯ ಜಂಗಲ್‌ರಾಜ್ ಆಗಿ ಪರಿವರ್ತನೆಯಾಗಿದ್ದು, ಪೊಲೀಸ್ ಠಾಣೆಗಳು ಸೆಟ್ಲ್‌ಮೆಂಟ್ ಅಡ್ಡೆಗಳಾಗಿವೆ. ಇಂತಹ ಘಟನೆಗಳನ್ನು ನಾವು ಸಹಿಸುವುದಿಲ್ಲ. ದಕ್ಷಿಣ ಬೆಂಗಳೂರು ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ಸೆ.24ಕ್ಕೆ ಕೋರ್ಟ್‌ಗೆ ಖುದ್ದು ಹಾಜರಾಗಬೇಕೆಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣವೇನು: ಶ್ರೀಕಾಂತ್ ಎಂಬುವರು ಮತ್ತು ಅರ್ಜಿದಾರರಾದ ವೆಂಕಟೇಶ್ ಗುಪ್ತಾ ಮತ್ತವರ ಪುತ್ರ ಶ್ರೀಹರಿ ಸಂಬಂಧಿಕರಾಗಿದ್ದಾರೆ. ಇವರುಗಳು ಒಂದೇ ಕಂಪೆನಿಯಲ್ಲಿ ಷೇರು ಹೂಡಿದ್ದು, ನಂತರದ ದಿನಗಳಲ್ಲಿ ಷೇರು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಇದೇ ವಿಚಾರದಲ್ಲಿ ಡಿಸಿಪಿಗೆ ದೂರು ಸಲ್ಲಿಸಿದ್ದ ಶ್ರೀಕಾಂತ್, ವೆಂಕಟೇಶ್ ಗುಪ್ತಾ ಮತ್ತವರ ಪುತ್ರ ಶ್ರೀಹರಿ ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದರು. ಪ್ರಕರಣ ಸಂಬಂಧ ಕಾನೂನು ಕ್ರಮ ಜರುಗಿಸಲು ಡಿಸಿಪಿ ಹೇಳಿದ್ದರು. ಇನ್ನು ಬಸವನಗುಡಿ ಠಾಣಾ ಇನ್ಸ್‌ಪೆಕ್ಟರ್ ಎಫ್‌ಐಆರ್ ದಾಖಲಿಸಿ, ಗುಪ್ತಾರನ್ನು ಬಂಧಿಸಿದ್ದರು. ಈ ಪ್ರಕರಣ ರದ್ದು ಕೋರಿ ಗುಪ್ತಾ ಹಾಗೂ ಶ್ರೀಹರಿ ಹೈಕೊರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News