ಮೂರು ತಿಂಗಳ ಬಳಿಕ ಬಿಜೆಪಿ ಮನೆಗೆ: ಮಲ್ಲಿಕಾರ್ಜುನ ಖರ್ಗೆ

Update: 2018-09-10 15:45 GMT

ಕಲಬುರ್ಗಿ, ಸೆ. 10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ, ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರದ ಬಗ್ಗೆ ಪ್ರಧಾನಿ ಮೋದಿ ಬಾಯಿ ಬಿಡುತ್ತಿಲ್ಲ. ಬಿಜೆಪಿ ಪಾಪದ ಕೊಡ ತುಂಬುತ್ತಿದ್ದು, ಮೂರು ತಿಂಗಳ ಬಳಿಕ ಮನೆಯ ಹಾದಿ ಹಿಡಿಯಲಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.

ಸೋಮವಾರ ನಗರದಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ರಾಷ್ಟ್ರವ್ಯಾಪ್ತಿ ಭಾರತ ಬಂದ್ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವ ವಿದ್ಯಾಲಯಗಳಿಗೆ ಆರೆಸೆಸ್ಸ್ ತತ್ವಗಳನ್ನು ಪಾಲಿಸುವ ಕುಲಪತಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ದೂರಿದರು.

ಹೊಸದಿಲ್ಲಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟರೂ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಸಂವಿಧಾನವನ್ನು ರಕ್ಷಿಸಬೇಕೆಂದು ನಾವು ಹೋರಾಟ ಮಾಡುತ್ತಿದ್ದೇವೆ. ಆದ್ದರಿಂದ ನಮ್ಮನ್ನು ಬೆಂಬಲಿಸಬೇಕು, ಪ್ರಧಾನಿ ಮೋದಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಕೋರಿದರು.

‘ಇನ್ನೂ 50 ವರ್ಷ ನಾವೇ ಇರುತ್ತೇವೆಂಬ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅತಿ ವಿಶ್ವಾಸದಲ್ಲಿದ್ದಾರೆ. ಗುಜರಾತ್ ಚುನಾವಣೆ ವೇಳೆ ಮೂರನೆ ಎರಡರಷ್ಟು ಸ್ಥಾನಗಳನ್ನು ಪಡೆಯುತ್ತೇವೆಂದು ಹೇಳಿದ್ದರು. ಆದರೆ, ಅಲ್ಲಿ ಏನಾಯಿತು ಎಂದು ದೇಶಕ್ಕೆ ಗೊತ್ತಿದೆ’

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News