ಗಣೇಶ ಹಬ್ಬ: ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ಸಿದ್ಧತೆ

Update: 2018-09-10 15:50 GMT

ಬೆಂಗಳೂರು, ಸೆ. 10: ಗಣೇಶ ಹಬ್ಬದ ಪ್ರಯುಕ್ತ ಸಂಘ/ಸಂಸ್ಥೆಗಳಿಗೆ ಅನುವಾಗುವ ದೃಷ್ಟಿಯಿಂದ ಬಿಬಿಎಂಪಿಯು 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಗಣೇಶ ವಿಸರ್ಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ, ಹಲಸೂರು, ಯಡಿಯೂರು ಕೆರೆಗಳಲ್ಲದೆ ಇತರೆ 22 ಕೆರೆಗಳಲ್ಲಿಯೂ ಸಾರ್ವಜನಿಕರು ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಕೆರೆಗಳು ವಸತಿ ಪ್ರದೇಶದಿಂದ ದೂರವಿರುವುದರಿಂದ ಸಾರ್ವಜನಿಕರು ಚಿಕ್ಕ ಚಿಕ್ಕ ಮೂರ್ತಿಗಳನ್ನು ವಿಸರ್ಜನೆ ಮಾಡಲಿಕ್ಕೆ ಪ್ರತಿ ವಲಯಗಳ ಪ್ರಮುಖ ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ.

ಬಿಬಿಎಂಪಿಯು 160 (282 ಸ್ಥಳಗಳಲ್ಲಿ) ಮತ್ತು ವಾಯುಮಾಲಿನ್ಯ ನಿಯಂತ್ರಣ ಮಂಡಳಿ 14 (32ಸ್ಥಳಗಳಲ್ಲಿ) ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್)ಗಳನ್ನು ಅಲ್ಲದೆ ತಾತ್ಕಾಲಿಕ ಟ್ಯಾಂಕ್‌ಗಳನ್ನು 63 ಕಡೆ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾದ ಬ್ಯಾರಿಕೇಡಿಂಗ್‌ಗಳನ್ನು ರೂಪಿಸಲಾಗಿದ್ದು ಪ್ರವೇಶ ದ್ವಾರಗಳಲ್ಲಿ ಸೂಕ್ತ ಮಾರ್ಗದರ್ಶಕ ಬ್ಯಾನರ್‌ಗಳನ್ನು ಅಳವಡಿಸಲಾಗಿರುತ್ತದೆ. ಪ್ರತಿಯೊಂದು ವಿಸರ್ಜನಾ ಕೇಂದ್ರಗಳಲ್ಲೂ ಪಾಳಿಯೊಂದರಲ್ಲಿ 10ಮಂದಿ ನುರಿತ ಈಜುಗಾರರನ್ನು ಹಾಗೂ ಅಗತ್ಯ ಸಿಬ್ಬಂದಿ ವರ್ಗದವರನ್ನು ನೇಮಿಸಲಾಗಿರುತ್ತದೆ.

ಆಯಾ ಸ್ಥಳಗಳಲ್ಲಿ ಸೂಕ್ತ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯವಾದ ವಿದ್ಯುತ್ ದ್ವೀಪಗಳ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ಇಂಜಿನಿಯರುಗಳು ಈ ಸಂದರ್ಭದಲ್ಲಿ ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ಪೂಜಾ ಸಾಮಗ್ರಿಗಳಾದ ಹೂವು, ಬಾಳೆಯ ಕಂದು, ತಳಿರು ತೋರಣ ಸೇರಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ನಿಗದಿತ ಕಂಟೈನರ್‌ಗಳಲ್ಲಿ ತುಂಬಿಸಿ, ಹೊರಗೆ ಸಾಗಿಸಲು ಅಗತ್ಯವಾದ ಪೌರಕಾರ್ಮಿಕ ಸಿಬ್ಬಂದಿ-ಲಾರಿಗಳನ್ನು ಸಜ್ಜುಗೊಳಿಸಲಾಗಿದೆ.

ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಅಗತ್ಯವಾದಲ್ಲಿ ಮೋಟಾರು ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್‌ಗಳ ವ್ಯವಸ್ಥೆ, ಕ್ರೈನ್‌ಗಳ ವ್ಯವಸ್ಥೆಗಳನ್ನು ರೂಪಿಸಲಾಗಿರುತ್ತದೆ. ಜೊತಗೆ ಮೇಲ್ಕಂಡ ಕೇಂದ್ರಗಳಲ್ಲಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಗಾಗಿ ಸೂಕ್ತ ಏರ್ಪಾಟುಗಳನ್ನು ಮಾಡಲಾಗಿದೆ.

ವಿಸರ್ಜನಾ ಮೆರವಣಿಗೆಯನ್ನು ಕೊಂಡೊಯ್ಯುವ ವೇಳೆ ಸಿಡಿಮದ್ದು ಪಟಾಕಿಗಳನ್ನು ಸಿಡಿಸುವುದನ್ನು ಹಾಗೂ ಧ್ವನಿವರ್ಧಕಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾತ್ರಿ 11ಗಂಟೆಯ ನಂತರ ಮೂರ್ತಿಗಳ ವಿಸರ್ಜನೆಗೆ ಅವಕಾಶವಿರುವುದಿಲ್ಲ.

ಪಾಲಿಕೆಯ ವ್ಯಾಪ್ತಿಯಲ್ಲಿರುವ ಕೆರೆ ಬಾವಿಗಳು ಕಲುಷಿತಗೊಳ್ಳದಂತೆ ತಡೆಗಟ್ಟಲು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿದ ಪಾಲಿಕೆಯಿಂದ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ನಿಗದಿ ಪಡಿಸಿದ ಸ್ಥಳಗಳಲ್ಲೇ ಮೂರ್ತಿಗಳನ್ನು ಸರ್ಜಿಸಬೇಕೆಂದು ಕೋರಲಾಗಿದೆ. ಬಣ್ಣದ ಗಣಪತಿ ಮೂರ್ತಿಗಳನ್ನು ಬಳಸುವುದನ್ನು ನಿಲ್ಲಿಸಿ ಪರಿಸರ ಸ್ನೇಹಿಮೂರ್ತಿಗಳನ್ನಿಟ್ಟು ಪೂಜಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News