ಮತೀಯ ಮನೋಭಾವ ಅಳಿಯಬೇಕಿದೆ: ಡಾ.ಅರವಿಂದ ಮಾಲಗತ್ತಿ

Update: 2018-09-10 15:54 GMT

ಬೆಂಗಳೂರು, ಸೆ. 10: ಪ್ರಕೃತಿ ವಿಕೋಪದಿಂದಾಗಿ ಕೊಡಗು ಹಾಗೂ ಕೇರಳದಲ್ಲಿ ಸಂತ್ರಸ್ತರು ಜಾತಿ, ಧರ್ಮ ಲೆಕ್ಕಿಸದೆ ಮಸೀದಿಯಲ್ಲಿ ಒಟ್ಟಿಗೆ ಇದ್ದ ಸನ್ನಿವೇಶ ನೋಡಿದರೆ ಪ್ರಕೃತಿಯಿಂದ ಮತೀಯ ಭಾವನೆ ತೊಲಗಿಸಲು ಸಾಧ್ಯ ಎಂದೆನಿಸುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದ್ದಾರೆ.

ಸೋಮವಾರ ನಗರದ ಕಸಾಪದಲ್ಲಿ ಜಾಣಗೆರೆ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಜಾಣಗೆರೆ ವೆಂಕಟರಾಮಯ್ಯ ಅವರ ‘ಜೀವಜಲ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಾತಿ ತಾರತಮ್ಯ ಅಧಿಕವಾಗುತ್ತಿದೆ. ಇತ್ತೀಚಿಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಾತಿ, ಧರ್ಮ ಮೀರಿ ಮಾನವೀಯತೆ ಪಾಠ ಕಲಿಸಿದೆ ಎಂದು ಹೇಳಿದರು. 

ಜೀವಜಲ ಕೃತಿಯಲ್ಲಿ ಗಾಂಧೀವಾದ ಹಾಗೂ ಜಾತಿ-ಧರ್ಮದ ಚರ್ಚೆ ಕಾಣಬಹುದು. ಗಾಂಧೀಜಿಯ ಗ್ರಾಮ ಭಾರತ ಕಲ್ಪನೆಯಾಗಿತ್ತು. ಆದರೆ, ಅಂಬೇಡ್ಕರ್ ಅವರದ್ದು ಗ್ರಾಮೀಣ ಪ್ರದೇಶದಲ್ಲಿ ಜಾತಿ ಬೇರು ಅಧಿಕವಾಗಿರುತ್ತದೆ. ಹೀಗಾಗಿ, ನಗರ ಪ್ರದೇಶದ ಅಗತ್ಯವಿದೆ ಎಂಬುದು ಅವರ ವಾದವಾಗಿತ್ತು ಎಂದು ಅವರು ತಿಳಿಸಿದರು.

ಜಾಣಗೆರೆ ವೆಂಕಟರಾಮಯ್ಯ ಅವರ ಜೀವಜಲ ಕಾದಂಬರಿ ನವ್ಯ ಕಾಲದ ಸಾಂಕೇತಿಕ ಜಡತ್ವದಂತೆ ಇಲ್ಲ. ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿದೆ. ಮಹಾಕಾವ್ಯ, ಕಾದಂಬರಿಗಳ ಕಾಲ ಮುಗಿದೆ ಹೋಯಿತು ಅನ್ನೋ ಮಾತು ಇದೆ. ಕ್ಷಣದಲ್ಲೇ ವಿಶ್ವವನ್ನು ಮುಟ್ಟುವಂತಹ, ಓದುವಂತಹ ತಂತ್ರಜ್ಞಾನವಿದ್ದರೂ ಇಂದಿನ ಕಾಲಕ್ಕೆ ಬೃಹತ್ ಕೃತಿಗಳ ಅವಶ್ಯಕತೆಯಿದೆ ಎಂದು ನುಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕುರುಕ್ಷೇತ್ರ ಮುಗಿದ ಮೇಲೆ ಕೃಷ್ಣನನ್ನು ಹೇಗೆ ಚಿತ್ರಿಸಬೇಕು ಎಂಬುದಾಗಿ ವ್ಯಾಸನಿಗೆ ಸಮಸ್ಯೆ ಶುರುವಾಗುತ್ತೆ. ಅದೇ ರೀತಿ ಜಾಣಗೆರೆ ಜೀವಜಲದ ಕೃತಿಯಲ್ಲಿ ನಾಯಕನನ್ನು ಹೇಗೆ ಚಿತ್ರಿಸಬೇಕು ಎಂದು ತಡವರಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ನಗರದ ಕಸಾಪ ಅಧ್ಯಕ್ಷ ಮಾಯಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News