ನೇತ್ರದಾನದಿಂದ ಮರಳಿ ಬದುಕು ಕಟ್ಟಿಕೊಂಡ ಹರೀಶ್‌ನಿಂದ ನೇತ್ರದಾನಕ್ಕೆ ಉತ್ತೇಜನ

Update: 2018-09-10 15:56 GMT

ಬೆಂಗಳೂರು, ಸೆ. 10: ‘ಕೆರಟೊಕೋನಸ್‌ನಿಂದ ನನ್ನ ದೃಷ್ಟಿ ನಾಶವಾದ ನಂತರ ಹತ್ತನೆ ತರಗತಿಗೆ ಶಾಲೆ ಬಿಟ್ಟೆ. ನೇತ್ರದಾನ ಹಾಗೂ ನಾರಾಯಣ ನೇತ್ರಾಲಯದ ವೈದ್ಯರ ಶ್ರಮದಿಂದ ನಾನು ಮತ್ತೆ ನೋಡಬಲ್ಲೆ, ಕಾಲೇಜಿಗೆ ಹೋಗಬಲ್ಲೆ ಹಾಗೂ ಚಿತ್ರ ಬಿಡಿಸಬಲ್ಲೆ’ ಎಂದು ಕಾರ್ನಿಯಾ ಬದಲಾವಣೆ ಮೂಲಕ ದೃಷ್ಟಿ ಪಡೆದ ಹಾಸನದ ಕಬ್ಬಳ್ಳಿಯ ಹರೀಶ್ ಹೇಳಿದ್ದಾರೆ.

ರವಿವಾರ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ನಾರಾಯಣ ನೇತ್ರಾಲಯ ಆಯೋಜಿಸಿದ್ದ ನೇತ್ರದಾನ ಕುರಿತ ಪೋಸ್ಟರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮರಳಿ ದೃಷ್ಟಿ ಪಡೆದ ನಾನು ಮತ್ತು ನನ್ನ ಕುಟುಂಬವೂ ನೇತ್ರದಾನ ಮಾಡಲಿದೆ ಮತ್ತು ಪ್ರತಿಯೊಬ್ಬರಿಗೂ ನೇತ್ರದಾನ ಮಾಡಲು ಉತ್ತೇಜಿಸಲಿದೆ ಎಂದು ತಿಳಿಸಿದರು.

1 ಲಕ್ಷ ಕಾರ್ನಿಯಾ ಬದಲಾವಣೆ: ಶಾಲಾ ಮಕ್ಕಳು ನೇತ್ರದಾನಕ್ಕೆ ಉತ್ತೇಜಿಸುತ್ತಿದ್ದು, ಅದೇ ರೀತಿ ಸಾರ್ವಜನಿಕರು ನೇತ್ರದಾನಕ್ಕೆ ಮುಂದಾಗಬೇಕು. ಆ ನಿಟ್ಟಿನಲ್ಲಿ ನಾವು ಜಾಗೃತಿ ಮೂಡಿಸುತ್ತಿದ್ದು, 2020ರ ವೇಳೆಗೆ 1ಲಕ್ಷ ಕಾರ್ನಿಯಾ ಬದಲಾವಣೆ ಮಾಡುವ ಯೋಜನೆ ಹೊಂದಿದ್ದೇವೆ ಎಂದು ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗ ಶೆಟ್ಟಿ ಹೇಳಿದ್ದಾರೆ.

ದಿಲ್ಲಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಮಂಜು ಬಾಲಸುಬ್ರಮಣಿಯಂ, ನೇತ್ರದಾನ ಕುರಿತು ಅರಿವು ಮೂಡಿಸಲು ನಾರಾಯಣ ನೇತ್ರಾಲಯದೊಂದಿಗೆ ಸಹಯೋಗ ಹೊಂದಿದೆ. ಮುಂದಿನ ಶಾಲಾ ಉತ್ಸವದಲ್ಲಿ ಎಲ್ಲ ಮಕ್ಕಳು ಹಾಗೂ ಪೋಷಕರನ್ನು ಅವರ ನೇತ್ರದಾನ ಪ್ರತಿಜ್ಞೆ ಕೈಗೊಳ್ಳಲು ಉತ್ತೇಜಿಸಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News