ಅಮೆರಿಕದಲ್ಲಿರುವ ಪಿಎಲ್‌ಒ ಕಚೇರಿ ಮುಚ್ಚಲು ಟ್ರಂಪ್ ಆಡಳಿತ ನಿರ್ಧಾರ

Update: 2018-09-10 16:08 GMT

ವಾಶಿಂಗ್ಟನ್, ಸೆ. 10: ವಾಶಿಂಗ್ಟನ್‌ನಲ್ಲಿರುವ ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ಕಚೇರಿಯನ್ನು ಮುಚ್ಚಲು ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರ ನಿರ್ಧರಿಸಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿಯೊಂದು ತಿಳಿಸಿದೆ.

ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಸಲಹಾಕಾರ ಜಾನ್ ಬೋಲ್ಟನ್ ಸೋಮವಾರ ತನ್ನ ಭಾಷಣದಲ್ಲಿ ಟ್ರಂಪ್ ಆಡಳಿತದ ಈ ನಿರ್ಧಾರವನ್ನು ಘೋಷಿಸಲಿದ್ದಾರೆ ಎಂದು ಪತ್ರಿಕೆಯು ರವಿವಾರ ವರದಿ ಮಾಡಿದೆ.

‘‘ಇಸ್ರೇಲ್‌ನೊಂದಿಗೆ ನೇರ ಮತ್ತು ಅರ್ಥಪೂರ್ಣ ಮಾತುಕತೆಗಳನ್ನು ಆರಂಭಿಸಲು ಫೆಲೆಸ್ತೀನಿಯರು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ, ಟ್ರಂಪ್ ಆಡಳಿತವು ಪಿಎಲ್‌ಒ ಕಚೇರಿಯನ್ನು ತೆರೆದಿಡುವುದಿಲ್ಲ’’ ಎಂದು ವರದಿ ಹೇಳಿದೆ.

ಅದೇ ವೇಳೆ, ಟ್ರಂಪ್ ಆಡಳಿತವು ತಮ್ಮ ವಿರುದ್ಧ ಪಕ್ಷಪಾತ ತೋರುತ್ತಿದೆ ಹಾಗೂ ಅದು ಇಸ್ರೇಲ್‌ನ ನಿಲುವುಗಳನ್ನು ಸಂಪೂರ್ಣವಾಗಿ ತನ್ನದಾಗಿಸಿದೆ ಎಂಬುದಾಗಿ ಫೆಲೆಸ್ತೀನಿಯರು ಹೇಳುತ್ತಾರೆ.

ವಿಶಾಲ ತಳಹದಿಯ ಅಂತಾರಾಷ್ಟ್ರೀಯ ವೇದಿಕೆಯೊಂದರ ಮಧ್ಯಸ್ಥಿಕೆಯಲ್ಲಿ ಮಾತ್ರ ತಾವು ಮಾತುಕತೆ ನಡೆಸುತ್ತೇವೆ ಎಂದು ಅವರು ಹೇಳುತ್ತಾರೆ.

ಐಸಿಸಿ ವಿರುದ್ಧವೂ ಕ್ರಮ: ಅಮೆರಿಕ

ಗಾಝಾದಲ್ಲಿ ಇಸ್ರೇಲ್ ನಡೆಸಿದ ಕೃತ್ಯಗಳ ವಿಚಾರಣೆಯನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ಮುಂದುವರಿಸಿದರೆ, ಅದರ ವಿರುದ್ಧವೂ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಬೆದರಿಕೆಯನ್ನೂ ಬೋಲ್ಟನ್ ಒಡ್ಡಲಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿ ಹೇಳಿದೆ.

ನ್ಯಾಯಾಲಯವು ಅಮೆರಿಕಕ್ಕೆ ವಿರುದ್ಧವಾಗಿ ಹೋದರೆ, ಅದರ ನ್ಯಾಯಾಧೀಶರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಹಾಗೂ ಅಮೆರಿಕದ ಹಣಕಾಸು ಸಂಸ್ಥೆಗಳಲ್ಲಿ ಅವರು ಹೂಡಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಬೋಲ್ಟನ್ ನೀಡಲಿದ್ದಾರೆ ಎಂದು ಪತ್ರಿಕೆ ಹೇಳಿದೆ.

2017ರಲ್ಲೇ ಮುಚ್ಚುವ ಬೆದರಿಕೆ ಹಾಕಿದ್ದ ಅಮೆರಿಕ

ಅಮೆರಿಕದ ಕಾನೂನಿನ ಪ್ರಕಾರ, ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳು ಮಾತುಕತೆ ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದ್ದ ಟ್ರಂಪ್ ಆಡಳಿತ, 2017ರಲ್ಲೇ ವಾಶಿಂಗ್ಟನ್‌ನಲ್ಲಿರುವ ಪಿಎಲ್‌ಒ ಕಚೇರಿಯನ್ನು ಮುಚ್ಚಲು ಮುಂದಾಗಿತ್ತು.

ಆದರೆ, ಆಗ ಅಮೆರಿಕ ಮತ್ತು ಫೆಲೆಸ್ತೀನ್ ಪ್ರಾಧಿಕಾರದ ಮಧ್ಯೆ ಸಂಧಾನ ಇನ್ನೂ ನಡೆಯುತ್ತಿತ್ತು. ಹಾಗಾಗಿ, ಅಮೆರಿಕ ಸರಕಾರವು ಈ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ, ಮುಂದೂಡಿತ್ತು.

ನಾವು ಎದೆಗುಂದುವುದಿಲ್ಲ: ಫೆಲೆಸ್ತೀನ್ ಅಧಿಕಾರಿ

ವಾಶಿಂಗ್ಟನ್‌ನಲ್ಲಿರುವ ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ಕಚೇರಿಯನ್ನು ಅಮೆರಿಕ ಮುಚ್ಚಿದರೂ, ಗಾಝಾದಲ್ಲಿ ಇಸ್ರೇಲ್ ನಡೆಸಿದ ಕೃತ್ಯಗಳ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಪ್ರಶ್ನಿಸುವುದನ್ನು ಮುಂದುವರಿಸುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಪಿಎಲ್‌ಒ ಕಚೇರಿಯನ್ನು ಮುಚ್ಚಲು ಅಮೆರಿಕ ತೆಗೆದುಕೊಂಡಿರುವ ನಿರ್ಧಾರವು ಇಸ್ರೇಲ್‌ನ ಅಪರಾಧಗಳನ್ನು ರಕ್ಷಿಸುವ ಹುನ್ನಾರವಾಗಿದೆ ಎಂದು ಫೆಲೆಸ್ತೀನ್‌ನ ಹಿರಿಯ ಅಧಿಕಾರಿ ಸಯೀಬ್ ಎರೆಕಟ್ ಆರೋಪಿಸಿದರು.

‘‘ಫೆಲೆಸ್ತೀನ್ ಜನರ ಹಕ್ಕುಗಳು ಮಾರಾಟಕ್ಕಿಲ್ಲ. ಅಮೆರಿಕದ ಬೆದರಿಕೆ ಮತ್ತು ಪೀಡನೆಗೆ ನಾವು ಜಗ್ಗುವುದಿಲ್ಲ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News