ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ಸ್ವಾಧೀನ ಪತ್ರ ನೀಡುತ್ತಿಲ್ಲ: ಅರ್ಜಿಗಳನ್ನು ಆಲಿಸಲು ನಿರಾಕರಿಸಿದ ಹೈಕೋರ್ಟ್

Update: 2018-09-10 16:17 GMT

ಬೆಂಗಳೂರು, ಸೆ.10: ಬಫರ್ ಝೋನ್ ವಲಯದಲ್ಲಿನ ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ಸ್ವಾಧೀನ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆಕ್ಷೇಪಿಸಲಾದ ಅರ್ಜಿಗಳನ್ನು ಅಲಿಸಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ಮೆಸರ್ಸ್ ಶಕ್ತಿ ಬಿಲ್ಡರ್ಸ್ ಹಾಗೂ ಮೆಸರ್ಸ್ ಮಂಗಳಾ ಎಂಟರ್‌ಪ್ರೈಸಸ್ ಸಲ್ಲಿಸಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ಅನುಸಾರ ಬಿಬಿಎಂಪಿ ಸ್ವಾಧೀನ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಲ್ಲಿ ಸರಕಾರ ಮಧ್ಯ ಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಕೆ.ಶಶಿಕಿರಣ ಶೆಟ್ಟಿ, ಈಗಾಗಲೇ ಇದೇ ಹೈಕೋರ್ಟ್‌ನ ಮತ್ತೊಂದು ಏಕಸದಸ್ಯ ನ್ಯಾಯಪೀಠ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರಬೇಕು ಎಂಬ ಷರತ್ತಿನೊಂದಿಗೆ ಸ್ವಾಧೀನ ಪ್ರಮಾಣ ಪತ್ರ ನೀಡಲು ನಿರ್ದೇಶಿಸಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಹಾಗಿದ್ದರೆ ಅದೇ ನ್ಯಾಯಪೀಠದ ಮುಂದೆ ಹೋಗಿ ನಿಮ್ಮ ಅರ್ಜಿ ಸಲ್ಲಿಸಿ ಇಲ್ಲವೇ ಸುಪ್ರೀಂ ಕೋರ್ಟ್‌ಗೇ ಹೋಗಿ. ನಾನಂತೂ ಇವುಗಳನ್ನು ಆಲಿಸುವುದಿಲ್ಲ. ಏಕೆಂದರೆ ಹಸಿರು ನ್ಯಾಯಮಂಡಳಿಯ ಅರ್ಜಿಗಳ ವಿಚಾರಣೆ ಹೈಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಸೂಚಿಸಿದರು. ಶಶಿಕಿರಣ ಶೆಟ್ಟಿ ಸಮಯಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News