ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2018-09-10 16:19 GMT

ಬೆಂಗಳೂರು, ಸೆ.10: ರಾಜ್ಯದಲ್ಲಿ 2018-19ನೆ ಸಾಲಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರು ಕಾಳನ್ನು ನಾಳೆಯಿಂದಲೇ(ಮಂಗಳವಾರ) ಖರೀದಿಸಲು ರಾಜ್ಯ ಸರಕಾರ ಪ್ರಾರಂಭ ಮಾಡಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದರು.

ಸೋಮವಾರ ವಿಕಾಸಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಲಬುರಗಿ, ಯಾದಗಿರಿ, ಗದಗ, ಬೀದರ್, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಸರು ಕಾಳು ಉತ್ಪನ್ನ ಪ್ರಮುಖ ಬೆಳೆಯಾಗಿದ್ದು, ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಇದ್ದ ಕಾರಣ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದರು.

ಅದರಂತೆಯೇ, ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್‌ಗೆ 6975 ರೂ.ಬೆಲೆಯನ್ನು ನಿಗದಿ ಮಾಡಿದ್ದು, ಮೇಲೆ ಹೇಳಿದ 7 ಜಿಲ್ಲೆಗಳಲ್ಲಿ 2018ನೇ ಸಾಲಿನಲ್ಲಿ 3.87 ಲಕ್ಷ ಹೆಕ್ಟರ್‌ನಲ್ಲಿ ಭಿತ್ತನೆಯಾಗಿದ್ದು, 1.24 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯನ್ನು ನಿರೀಕ್ಷೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಈಗಾಗಲೇ ಆ.29ರಿಂದಲೇ ನೋಂದಣಿಯನ್ನು ಪ್ರಾರಂಭ ಮಾಡಿದ್ದೇವೆ. ನೋಂದಣಿ ಕಾರ್ಯ ಸೆ.18ರವರೆಗೆ ವಿಸ್ತರಿಸಲಾಗಿದೆ. ಇದರ ಜೊತೆ ಜೊತೆಯಲ್ಲಿಯೇ ಸೆ.11ರಿಂದಲೇ ಹೆಸರು ಕಾಳು ಖರೀದಿಸಲು ಸೂಚಿಸಲಾಗಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಉದ್ದಿನ ಕಾಳಿಗೂ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಸದ್ಯ ಉದ್ದಿಗೆ 5600 ರೂ.ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ಇದ್ದು, 0.82 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, 0.38 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ಸೋಯಾಬಿನ್‌ಗೂ ಬೆಂಬಲ ಬೆಲೆಯನ್ನು ಕೇಳಿದ್ದೇವೆ. ಇದಕ್ಕೂ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. 3.07 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, 3.07 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಸೋಯಾಬಿನ್‌ಗೆ 3399 ರೂ.ಬೆಂಬಲ ಬೆಲೆ ನಿಗದಿಯಾಗಿದೆ. ಇದನ್ನು ಹೆಚ್ಚಿಸುವಂತೆಯೂ ಮನವಿ ಮಾಡಲಾಗಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

2016-17ನೆ ಸಾಲಿನಲ್ಲಿ 8.18 ಕೋಟಿ ರೂ.ಮೌಲ್ಯದ ತೊಗರಿ ಮಾರಾಟವಾಗದೇ ಉಳಿದಿತ್ತು. ಕೇಂದ್ರ ಸರಕಾರದ ಬಫರ್ ಸ್ಟಾಕ್ ಯೋಜನೆಯಡಿಯಲ್ಲಿ ತೊಗರಿಯನ್ನು ಖರೀದಿಸಲು ನ್ಯಾಫೆಡ್ ಸಂಸ್ಥೆಯು ಮಾರ್ಕ್‌ಫೆಡ್ ಸಂಸ್ಥೆಯನ್ನು ಉಪ ಖರೀದಿ ಸಂಸ್ಥೆಯನ್ನಾಗಿ ನೇಮಿಸಿ ಇದರ ಮೂಲಕ ತೊಗರಿಯನ್ನು ಖರೀದಿಸಲಾಗಿದ್ದು, 2017ರ ಎಪ್ರಿಲ್ 22ರ ಅಂತ್ಯಕ್ಕೆ 1,69,785.77 ಮೆಟ್ರಿಕ್ ಟನ್‌ನಷ್ಟು ತೊಗರಿಯನ್ನು ಖರೀದಿಸಿರುವುದಾಗಿ ಮಾರ್ಕ್‌ಫೆಡ್ ಸಂಸ್ಥೆಯವರು ನಾಫೆಡ್ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.

ಸುಮಾರು 1621.50 ಮೆಟ್ರಿಕ್ ಟನ್ ತೊಗರಿ ಸಂಗ್ರಹ ಹಾಗೆ ಉಳಿದಿದ್ದು, ಏಕೆ ಉಳಿದಿದೆ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ. ಆವರ್ತ ನಿಧಿ 954.26 ಕೋಟಿ ರೂ.ಗಳಷ್ಟು ಉಳಿದುಕೊಂಡಿದ್ದು, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದು, ಅದರ ಬಳಕೆಗೆ ಕ್ರಮ ವಹಿಸುವಂತೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News