ಡಬ್ಲ್ಯುಟಿಸಿ ಮೇಲೆ ಭಯೋತ್ಪಾದಕ ದಾಳಿ ನಡೆದು 17 ವರ್ಷ

Update: 2018-09-10 16:19 GMT

ನ್ಯೂಯಾರ್ಕ್, ಸೆ. 10: ಇಲ್ಲಿನ ವಿಶ್ವ ವ್ಯಾಪಾರ ಕೇಂದ್ರ (ಡಬ್ಲ್ಯುಟಿಸಿ)ದ ಅವಳಿ ಗೋಪುರಗಳ ಮೇಲೆ ದಾಳಿ ನಡೆದು 17 ವರ್ಷಗಳೇ ಕಳೆದಿವೆ. ಆದರೆ, ಆ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 1,100ಕ್ಕೂ ಅಧಿಕ ವ್ಯಕ್ತಿಗಳ ಗುರುತನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.

ಆದಾಗ್ಯೂ, ನ್ಯೂಯಾರ್ಕ್‌ನ ಪ್ರಯೋಗಾಲಯವೊಂದರಲ್ಲಿ, ತಂಡವೊಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಬಳಸಿಕೊಂಡು ಅವಶೇಷಗಳನ್ನು ಗುರುತಿಸಲು ಈಗಲೂ ಪ್ರಯತ್ನಿಸುತ್ತಿದೆ.

ಪ್ರತಿ ದಿನವೂ ಅವರು ಇದೇ ಪ್ರಕ್ರಿಯೆಯನ್ನು ಹತ್ತಾರು ಸಲ ಪುನರಾವರ್ತಿಸುತ್ತಾರೆ.

‘‘ಎಲುಬು ಅತ್ಯಂತ ಕಠಿಣ ಜೈವಿಕ ವಸ್ತುವಾಗಿದ್ದು, ಅದರ ಜೊತೆ ವ್ಯವಹರಿಸುವುದು ಕಷ್ಟವಾಗಿದೆ’’ ಎಂದು ನ್ಯೂಯಾರ್ಕ್‌ನ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಯಲ್ಲಿ ವಿಧಿವಿಜ್ಞಾನ ಜೀವಶಾಸ್ತ್ರದ ಸಹಾಯಕ ನಿರ್ದೇಶಕ ಮಾರ್ಕ್ ಡಿಸೈರ್ ಹೇಳುತ್ತಾರೆ.

‘‘ಅದೂ ಅಲ್ಲದೆ, ಅವಳಿ ಗೋಪುರದ ಸಂಕೀರ್ಣದಲ್ಲಿರುವ ಬೆಂಕಿ, ಅಚ್ಚು, ಬ್ಯಾಕ್ಟೀರಿಯ, ಸೂರ್ಯಕಿರಣ, ವಿಮಾನ ಇಂಧನ, ಡೀಸೆಲ್ ಮುಂತಾದ ವಸ್ತುಗಳ ಸಂಪರ್ಕಕ್ಕೆ ಎಲುಬು ಬಂದರೆ ಡಿಎನ್‌ಎ ನಾಶವಾಗುತ್ತದೆ’’ ಎಂದು ಅವರು ತಿಳಿಸಿದರು.

ದಾಳಿ ನಡೆದಂದಿನಿಂದ, ಈ ಸ್ಥಳದಲ್ಲಿ 22,000 ಮಾನವ ಪಳೆಯುಳಿಕೆಗಳು ಪತ್ತೆಯಾಗಿವೆ ಹಾಗೂ ಅವುಗಳೆಲ್ಲವನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಈವರೆಗೆ, ನ್ಯೂಯಾರ್ಕ್‌ನಲ್ಲಿ ಮೃತಪಟ್ಟ 2,753 ಮಂದಿಯ ಪೈಕಿ ಕೇವಲ 1,642 ಮಂದಿಯನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಇತರ 1,111 ಮಂದಿಯನ್ನು ಇನ್ನಷ್ಟೇ ಗುರುತಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News