ಬಿ.ಎ.ಮೊಹಿದೀನ್ ಅವರದ್ದು ವಿಶ್ವವ್ಯಾಪಿ ವ್ಯಕ್ತಿತ್ವ: ಪ್ರೊ. ಕೆ.ಇ.ರಾಧಾಕೃಷ್ಣ

Update: 2018-09-10 16:57 GMT

ಬೆಂಗಳೂರು, ಸೆ.10: ಬಿ.ಎ.ಮೊಹಿದೀನ್ ಆಧುನಿಕ ಕಾಲದ ಸೂಫಿ, ಸಂತರಾಗಿದ್ದು, ಆ ಪರಂಪರೆಗೆ ಸೇರಿದವರಾಗಿದ್ದರು. ಒಪ್ಪಿಕೊಂಡ ಕೆಲಸವನ್ನು ಪೂರ್ತಿ ಮಾಡುವವರೆಗೂ ಬಿಡದ ಅವರು ಅದಕ್ಕಾಗಿ ಅಪಾರವಾದ ಶ್ರಮ ವಹಿಸುತ್ತಿದ್ದರು. ತನ್ನನ್ನು ತನ್ನೊಳಗೆ ಬಂಧಿಸಿಕೊಳ್ಳದೇ ಇಡೀ ವಿಶ್ವವ್ಯಾಪಿ ವ್ಯಕ್ತಿತ್ವ ಅವರದ್ದಾಗಿದೆ ಎಂದು ಶಿಕ್ಷಣ ತಜ್ಞ ಹಾಗೂ ಸಾಹಿತಿ ಪ್ರೊ. ಕೆ.ಇ. ರಾಧಾಕೃಷ್ಣ ಹೇಳಿದರು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮುಹಮ್ಮದ್ ಕುಳಾಯಿ ಹಾಗೂ ಬಿ.ಎ.ಮುಹಮ್ಮದ್ ಅಲಿ ನಿರೂಪಿಸಿರುವ ಬಿ.ಎ.ಮೊಹಿದೀನ್ ಅವರ ಆತ್ಮಕಥನ 'ನನ್ನೊಳಗಿನ ನಾನು' ಕೃತಿಯ ಎರಡನೇ ಮುದ್ರಣದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೊಹಿದೀನ್ ಅವರ ನನ್ನೊಳಗಿನ ನಾನು ಆತ್ಮಕಥೆಯಲ್ಲಿನ ಪಾತ್ರಗಳು ಮೈದುಂಬಿ ಹಿಡಿದು ಕೊಳ್ಳುತ್ತವೆ. ಅದರಲ್ಲಿ ಹೃದಯವಂತಿಕೆ ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸಾಮರಸ್ಯ, ಸೌಹಾರ್ದತೆ ಕಣ್ಣಿಗೆ ಕಟ್ಟುವಂತೆ ಕಾಣುತ್ತಿದೆ ಎಂದ ಅವರು, ಇತ್ತೀಚಿಗೆ ವಿಜೃಂಭಣೆಯ ಜಗತ್ತಿನಲ್ಲಿದ್ದು, ಈ ಸಂದರ್ಭ ದಲ್ಲಿ ಮೊಹಿದೀನ್‌ರ ಆದರ್ಶ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದರು.

ಮೊಹಿದೀನ್ ತನ್ನ ಸಣ್ಣ ವಯಸ್ಸಿ ನಿಂದಲೇ ದ್ವೇಷಿಸುವ ವಿಚಾರಗಳನ್ನು ವಿರೋಧಿಸುತ್ತಿದ್ದರು. ನಾನು ಕ್ರಿಶ್ಚಿಯನ್ ಶಾಲೆಯಲ್ಲಿ ಓದಿದ್ದೇನೆ. ಅವರು ಎಂದಿಗೂ ಬಲವಂತವಾಗಿ ಪ್ರಾರ್ಥನೆಗೆ ಕರೆದವರಲ್ಲ. ಬದಲಿಗೆ, ನಮಗೆ ತೋಟಗಾರಿಕೆ ಕೆಲಸ ಮಾಡಿಸುತ್ತಿದ್ದರು. ಎರಡೂ ಒಂದೇ ಅಲ್ಲವಾ ಎಂದು ಆತ್ಮಕಥೆಯಲ್ಲಿ ಹೇಳಿ ಕೊಂಡಿದ್ದಾರೆ. ಇಂದು ನಮ್ಮಲ್ಲಿನ ಶಕ್ತಿಯೇ ಸತ್ಯವಾಗಿದ್ದು, ಅದನ್ನು ಪೂಜಿಸಬೇಕು ಎಂಬ ಜಗತ್ತಿನಲ್ಲಿದ್ದೇವೆ. ಆದರೆ, ಮೊಹಿದೀನ್ ದಾರ್ಶನಿಕ ಶಕ್ತಿಯನ್ನು ನಂಬಿದ್ದರು. ಅಧಿಕಾರ, ದರ್ಪದ ಶಕ್ತಿಯನ್ನು ತಿರಸ್ಕರಿಸಿದ್ದರು ಎಂದು ಅವರು ಹೇಳಿದರು.

ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ಕರಾವಳಿಯಲ್ಲಿ ಬಿ.ಎಂ.ಇದಿನಬ್ಬ ಹಾಗೂ ಮೊಹಿದೀನ್ ಇಬ್ಬರು ಮಹಾನ್ ನಾಯಕರಾಗಿದ್ದಾರೆ. ಮೊಹಿದೀನ್ ಎಂದೂ ನಾನು ದೊಡ್ಡವನು, ಸಾಧನೆ ಮಾಡಿದ್ದೇನೆ ಎಂದುಕೊಂಡವರಲ್ಲ. ಸರಳವಾಗಿ ಜೀವನವನ್ನು ಕಳೆಯಬೇಕು ಎಂದುಕೊಂಡಿದ್ದ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಬ್ಯಾರಿ, ಜೆಡಿಎಸ್‌ನ ರಾಷ್ಟ್ರೀಯ ವಕ್ತಾರ ತನ್ವೀರ್ ಅಹಮದ್, ಮೊಹಿದೀನ್ ಅವರ ಹಿರಿಯ ಪುತ್ರ ಮುಶ್ತಾಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

'ದ.ಕ. ಜಿಲ್ಲೆಯಲ್ಲಿ ಸಾಮರಸ್ಯ ಹದಗೆಟ್ಟಿದೆ'

ಸೌಹಾರ್ದ, ಸಾಮರಸ್ಯಕ್ಕೆ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿಗೆ ಸಂಪೂರ್ಣವಾಗಿ ಹದಗೆಟ್ಟಿದೆ. ಒಬ್ಬ ವ್ಯಕ್ತಿಯಿಂದ ಸಾಮರಸ್ಯಕ್ಕೆ ಕೊಳ್ಳಿ ಇಡುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರೊ. ಕೆ.ಇ. ರಾಧಾಕೃಷ್ಣ ಬೇಸರ ವ್ಯಕ್ತಪಡಿಸಿದರು.

ನಮ್ಮ ಬಾಲ್ಯದ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯ ಜೀವನ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ನನ್ನೊಳಗಿನ ನಾನು ಕೃತಿಯಲ್ಲಿಯೂ ಅವರ ಬಾಲ್ಯ ಜೀವನದ ಸಂದರ್ಭದಲ್ಲಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂದಿನ ಸಂದರ್ಭದಲ್ಲಿ ನಮ್ಮ ಕುಟುಂಬದಲ್ಲಿ ಎಂತಹ ಕಾರ್ಯಕ್ರಮ ನಡೆದರೂ ಬ್ಯಾರಿ ಕುಟುಂಬದವರು ಬಂದು ಚಪ್ಪರ ಹಾಕುವುದರಿಂದ ಆರಂಭಿಸಿ, ಅಡುಗೆ ಮಾಡಿ ಬಡಿಸುವವರೆಗೂ ಜೊತೆಗೆ ನಿಲ್ಲುತ್ತಿದ್ದರು. ಅದೇ ರೀತಿ ಮುಸ್ಲಿಮ್ ಸಮುದಾಯದಲ್ಲಿನ ಎಲ್ಲ ಕಾರ್ಯಕ್ರಮಗಳಿಗೆ ನಾವು ಜೊತೆಯಾಗುತ್ತಿದ್ದೆವು. ಆದರೆ, ಇಂದು ಅಂತಹ ಜಗತ್ತನ್ನು ನಮ್ಮ ಕಣ್ಣೆದುರಿಗೆ ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News