ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲದವರ ಗಡೀಪಾರು: ಬಿಜೆಪಿ

Update: 2018-09-11 04:11 GMT
ರಾಮ ಮಾಧವ್

ಹೊಸದಿಲ್ಲಿ, ಸೆ.11: ಅಸ್ಸಾಂನಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ಅಂತಿಮ ಪಟ್ಟಿಯಲ್ಲಿ ಸೇರದ ನಾಗರಿಕರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿ ದೇಶದಿಂದ ಗಡೀಪಾರು ಮಾಡಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೆ ತರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಸಲಹೆ ಮಾಡಿದ್ದಾರೆ.

"ಕಾನೂನುಬಾಹಿರವಾಗಿ ವಲಸೆ ಬಂದು ನೆಲೆಸಿರುವ ಎಲ್ಲರನ್ನು ಎನ್‌ಆರ್‌ಸಿ ಪತ್ತೆ ಹಚ್ಚಲಿದೆ. ಮುಂದಿನ ಹೆಜ್ಜೆ ಮತದಾರರ ಪಟ್ಟಿಯಿಂದ ಅವರನ್ನು ಕಿತ್ತು ಹಾಕುವುದು ಹಾಗೂ ಎಲ್ಲ ಸರ್ಕಾರಿ ಸವಲತ್ತುಗಳನ್ನು ಸ್ಥಗಿತಗೊಳಿಸುವುದು. ಅಂತಿಮವಾಗಿ ಅವರನ್ನು ದೇಶದಿಂದ ಗಡೀಪಾರು ಮಾಡಲಾಗುವುದು" ಎಂದು ಎನ್‌ಆರ್‌ಸಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾಧವ್ ಹೇಳಿದರು.

1985ರಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಅನುಗುಣವಾಗಿ ನಾಗರಿಕರ ನೋಂದಣಿ ಪಟ್ಟಿ ಪರಿಷ್ಕರಿಸಲಾಗುತ್ತಿದೆ. ಇದರ ಅನ್ವಯ ಅಕ್ರಮ ವಲಸಿಗರನ್ನು ಪತ್ತೆ ಮಾಡಿ, ಪಟ್ಟಿಯಿಂದ ಕಿತ್ತುಹಾಕಿ ಗಡೀಪಾರು ಮಾಡುವ ಬದ್ಧತೆ ನಮ್ಮ ಸರ್ಕಾರದ್ದು ಎಂದು ಅವರು ಸ್ಪಷ್ಟಪಡಿಸಿದರು.

ಭಾರತದ ನೈಜ ನಾಗರಿಕರಿಗೆ ತಮ್ಮ ನಾಗರಿಕತ್ವ ನಿರೂಪಿಸಲು ಸಾಕಷ್ಟು ಅವಕಾಶಗಳು ಸಿಗಲಿವೆ ಮತ್ತು ತಮ್ಮ ಹೆಸರುಗಳನ್ನು ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ ಎಂದು ಮುಖ್ಯಮಂತ್ರಿ ಸೋನೊವಾಲ್ ಹೇಳಿದ್ದಾರೆ.

"ಎನ್‌ಆರ್‌ಸಿಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಬೇಕು. ಇದು ಎಲ್ಲ ಭಾರತೀಯರನ್ನು ಸಂರಕ್ಷಿಸಬಹುದಾದ ದಾಖಲೆ. ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿರುವವರು ಬೇರೆ ರಾಜ್ಯಗಳಿಗೆ ಹೋಗುವ ಸಾಧ್ಯತೆ ಇದೆ. ನಾವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ" ಎಂದು ರಾಮ್‌ಬಾಹು ಮ್ಹಾಳಗಿ ಪ್ರಬೋಧಿನಿ ಆಯೋಜಿಸಿದ್ದ ಸಮಾರಂಭದಲ್ಲಿ ಸೋನೊವಾಲ್ ಅಭಿಪ್ರಾಯಪಟ್ಟರು.

ಜುಲೈ 30ರಂದು ಪ್ರಕಟಿಸಿದ ಕರಡು ಪಟ್ಟಿಯಿಂದ ರಾಜ್ಯದ ಸುಮಾರು 40 ಲಕ್ಷ ಮಂದಿಯ ಹೆಸರು ಬಿಟ್ಟುಹೋದ ಹಿನ್ನೆಲೆಯಲ್ಲಿ ರಾಜಕೀಯ ವಿವಾದ ಹುಟ್ಟಿಕೊಂಡಿದೆ. ಅಸ್ಸಾಂನಲ್ಲಿ ವಾಸಿಸುವ ನೈಜ ನಾಗರಿಕರ ಪತ್ತೆಗೆ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಎನ್‌ಆರ್‌ಸಿ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News