ಜನರ ಕೈಗೆ 'ಚಾರ್ಟ್' ಕೊಟ್ಟು ಹೊಡೆಸಿಕೊಂಡ ಬಿಜೆಪಿ !

Update: 2018-09-11 06:27 GMT

ಹೊಸದಿಲ್ಲಿ,ಸೆ.11 : ದೇಶಾದ್ಯಂತ ಇಂಧನ ಬೆಲೆಯೇರಿಕೆಯಿಂದ ಜನರು ಕಂಗೆಟ್ಟಿರುವಾಗ ಭಾರತೀಯ ಜನತಾ ಪಕ್ಷ ಸೋಮವಾರ ಕೆಲವೊಂದು ಪ್ರಶ್ನಾರ್ಹ ಗ್ರಾಫ್ ಮತ್ತು ಚಾರ್ಟುಗಳನ್ನು ಮುಂದಿಟ್ಟು ಕೇಂದ್ರದ ಮೋದಿ ಸರಕಾರ ಏರುತ್ತಿರುವ ಇಂಧನ ಬೆಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿಲ್ಲ ಹಾಗೂ ಹಿಂದಿನ ಸರಕಾರಗಳ ಅವಧಿಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು ಎಂದು ಹೇಳಲು ಪ್ರಯತ್ನಿಸಿದೆ.

ಸೋಮವಾರ ಸಂಜೆ ಬಿಜೆಪಿಯ ಟ್ವಿಟ್ಟರ್ ಹ್ಯಾಂಡಲ್ ನಾಲ್ಕು  ಚಾರ್ಟುಗಳನ್ನು ಪ್ರಸ್ತುತ ಪಡಿಸಿ ‘ಟ್ರುತ್ ಆಫ್ ಹೈಕ್ ಇನ್ ಪೆಟ್ರೋಲಿಯಂ ಪ್ರೈಸಸ್' ಎಂಬ ಶೀರ್ಷಿಕೆ ನೀಡಿತ್ತು.

ಎಲ್ಲಾ ನಾಲ್ಕು ಚಾರ್ಟುಗಳೂ ಒಂದೇ ರೀತಿಯಾಗಿದ್ದರೂ ಮೊದಲ ಚಾರ್ಟ್ ಸಾಕಷ್ಟು ಗೊಂದಲಕಾರಿಯಾಗಿದೆ.  ಪೆಟ್ರೋಲ್ ಬೆಲೆ ಸೆಪ್ಟೆಂಬರ್ 10, 2018ರಂದು (ರೂ. 80.73) ಮೇ 2014ರಲ್ಲಿದ್ದುದಕ್ಕಿಂತ (ರೂ. 71.41) ಹೆಚ್ಚಾಗಿದ್ದರೂ ಚಾರ್ಟ್ ಮಾತ್ರ 80ಕ್ಕಿಂತ 71 ಹೆಚ್ಚು ಎಂದು ಬಿಂಬಿಸುತ್ತದೆ.

ಎರಡನೇ ಗ್ರಾಫ್ ನಲ್ಲಿ ಸೆಪ್ಟೆಂಬರ್  2018ರಲ್ಲಿನ ದರ ರೂ. 72.83  ಮೇ 2009ರಲ್ಲಿದ್ದ ರೂ. 30.86ಕ್ಕಿಂತ ಹೆಚ್ಚೇನಿಲ್ಲ ಎಂಬಂತೆ ಬಿಂಬಿಸಲಾಗಿದೆ.

ಶೀರ್ಷಿಕೆಯಲ್ಲಿ ಶೇಕಡಾವಾರು ಇಂಧನ ದರಗಳ ಹೆಚ್ಚಳವೆಂದು ವಿವರಿಸಲಾಗಿದ್ದರೂ ಸಮರ್ಥನೀಯವಾಗಿ ಕಂಡಿಲ್ಲ. ಪ್ರಥಮ ಗ್ರಾಫ್ ನಲ್ಲಿ ಶೇ. 13ರಷ್ಟು ಹೆಚ್ಚಳವನ್ನು ಕುಸಿತವೆಂಬಂತೆ ಬಿಂಬಿಸಲಾಗಿದ್ದು, 2009 ಹಾಗೂ 2014 ನಡುವಿನ ಶೇ. 75.8 ಹೆಚ್ಚಳವನ್ನು 2004 ಹಾಗೂ 2009ರ ನಡುವಿನ ಶೇ. 20.5ರಷ್ಟು ಹೆಚ್ಚಳಕ್ಕಿಂತ ಒಂದಿನಿತೇ ಹೆಚ್ಚಳ ಎಂಬಂತೆ ಬಿಂಬಿಸಲಾಗಿದೆ.

ಈ ಗ್ರಾಫ್ ಗಳು ಟ್ವಿಟ್ಟರ್ ನಲ್ಲಿ ಸಾಕಷ್ಟು ವ್ಯಂಗ್ಯ ಹಾಗೂ ಅಪಹಾಸ್ಯಕ್ಕೆ ಕಾರಣವಾಗಿವೆ.

ಮೋದಿ ಸರಕಾರ ಕಳೆದ ಕೆಲ ದಿನಗಳಿಂದ ಇಂಧನ ಬೆಲೆಯೇರಿಕೆಗೆ ಜಾಗತಿಕ ತೈಲ ಬೆಲೆಗಳು ಕಾರಣವೆನ್ನುತ್ತಿವೆ. ಹಾಗಿದ್ದರೆ  ಹಿಂದಿನ ಸರಕಾರದ ಅವಧಿಯಲ್ಲಿ ಇಂಧನ ಬೆಲೆ ಬಹಳಷ್ಟು ಏರಿದೆಯೆಂದು ಅದು ಹೇಗೆ ಹೇಳಬಲ್ಲದು?

ಕೇಂದ್ರ ವಿಧಿಸುವ ತೆರಿಗೆಗಳು  ಪೆಟ್ರೋಲ್ ಮತ್ತು ಡೀಸೆಲ್ ನ ಅಂತಿಮ ರಿಟೇಲ್ ದರವನ್ನು ಸೂಚಿಸುತ್ತವೆ ಎಂಬುದು ವಾಸ್ತವ. ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರಗಳು ಕುಸಿದಿವೆಯಾದರೂ  ತೆರಿಗೆಗಳು ಕಡಿಮೆಯಾಗದೆ ಹಾಗೆಯೇ ಇದ್ದು ನಂತರ ಏರಿಕೆ ಕೂಡ ಕಂಡಿವೆ.

ಅಂತೆಯೇ ಪೆಟ್ರೋಲಿಯಂ ಉತ್ಪನ್ನಗಳಿಂದ ಕೇಂದ್ರದ ಆದಾಯ 2014-15ರಲ್ಲಿದ್ದ ರೂ. 99,000 ಕೋಟಿಯಿಂದ 2017-18 ಅವಧಿಯಲ್ಲಿ ರೂ. 2 ಲಕ್ಷ ಕೋಟಿಗೂ ಅಧಿಕವಾಗಿದೆ.

ಆಟೋರಿಕ್ಷಾ ಇಂದನದ ಮೇಲೆ ಅಬಕಾರಿ ಸುಂಕವನ್ನು ಕೇಂದ್ರ 2014-15 ಹಾಗೂ 2015-16ರ ಅವಧಿಯಲ್ಲಿ ಒಂಬತ್ತು ಬಾರಿ ಏರಿಸಿದೆ. ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಪೆಟ್ರೋಲ್ ಮತ್ತು ಡಿಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ ರೂ. 9.48 ಹಾಗೂ ರೂ. 3.56 ಆಗಿತ್ತ್ತು. ಆದರೆ ಮುಂದೆ ಅದು ತಲಾ ಲೀಟರ್ ಗೆ ರೂ. 21.48 ಹಾಗೂ ರೂ. 17.33ರಷ್ಟು ಏರಿಕೆ ಅಂದರೆ ಶೇ. 226 ಹಾಗೂ ಶೇ. 486ರಷ್ಟು ಏರಿಕೆಯಾಗಿದೆ. ಜಾಗತಿಕ ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಗೆ 2014ರಲ್ಲಿದ್ದ 100 ಡಾಲರ್ ನಿಂದ 2015ಲ್ಲಿ 40 ಡಾಲರ್ ಗೆ ಇಳಿಕೆಯಾದ ಹೊರತಾಗಿಯೂ ಬೆಲೆ ಏರಿಕೆಯಾಗಿತ್ತು.

ದೇಶದಲ್ಲಿ 29ರಲ್ಲಿ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆಯಾದರೂ ಇಲ್ಲಿಯ ತನಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ರೂ. 1ರಷ್ಟು ಕಡಿತಗೊಳಿಸಿದ್ದು ಕೇರಳವಾದರೆ ರಾಜಸ್ಥಾನ ಇತ್ತೀಚೆಗೆ ವ್ಯಾಟ್ ಕಡಿಮೆಗೊಳಿಸಿ ತಲಾ ಲೀಟರ್ ಗೆ ರೂ 2.5ರಷ್ಟು ಬೆಲೆ ಕಡಿಮೆಗೊಳಿಸಿದೆ.

ಪೆಟ್ರೋಲ್ ಮೇಲೆ ಗರಿಷ್ಠ ವ್ಯಾಟ್  ವಿಧಿಸಿರುವ ಮಹಾರಾಷ್ಟ್ರ ಕೂಡ ಪೆಟ್ರೋಲ್ ಬೆಲೆ ಇಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News