ಎಬಿವಿಪಿ ಬೆಂಬಲಿಗರಿಂದ ದಿಲ್ಲಿ ಕಾಲೇಜಿನಲ್ಲಿ ದಾಂಧಲೆ

Update: 2018-09-11 06:34 GMT

ಹೊಸದಿಲ್ಲಿ, ಸೆ.11: ದಿಲ್ಲಿಯ ಝಾಕೀರ್ ಹುಸೈನ್ ಕಾಲೇಜಿನ ಆವರಣದಲ್ಲಿ ಎಬಿವಿಪಿಯ ಚುನಾವಣಾ ಪ್ರಚಾರಕರ ತಂಡವೊಂದು ದಾಂಧಲೆಗೈದ ಘಟನೆ ಸೋಮವಾರ ನಡೆದಿದೆ. ಕಾಲೇಜು ಅಂಗಣಕ್ಕೆ ಪ್ರವೇಶಿಸಲು ಅಲ್ಲಿನ ಭದ್ರತಾ ಸಿಬ್ಬಂದಿ ನಿರಾಕರಿಸಿದ್ದರಿಂದ ಸಿಟ್ಟಿನಿಂದ ಒಳನುಗ್ಗಿದ ತಂಡ ಕೈಯಲ್ಲಿದ್ದ ಕೋಲುಗಳಿಂದ ಅಲ್ಲಿದ್ದ ಹೂವಿನ ಕುಂಡಗಳನ್ನು ಹಾಗೂ ಪೀಠೋಪಕರಣಗಳನ್ನು ಹಾನಿಗೊಳಿಸಿದೆಯಲ್ಲದೆ ಘೋಷಣೆಗಳನ್ನು ಕೂಗುತ್ತಾ ಗದ್ದಲವೆಬ್ಬಿಸಿದೆ.

ಘಟನೆಯನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಗೈದು ದಾಂಧಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಎಬಿವಿಪಿ ಅಭ್ಯರ್ಥಿ ಶಕ್ತಿ ಸಿಂಗ್ ಎಂಬಾತ ತನ್ನ 50ರಿಂದ 100 ಮಂದಿ ಬೆಂಬಲಿಗರೊಂದಿಗೆ ಕಾಲೇಜು ಆವರಣ ಪ್ರವೇಶಿಸಲು ಯತ್ನಿಸಿದಾಗ ಈ ಘಟನೆ ನಡೆಯಿತು. ಆಗ ಇತರ ವಿದ್ಯಾರ್ಥಿಗಳು ದಾಂಧಲೆಕೋರರಿಂದ ತಪ್ಪಿಸಿಕೊಳ್ಳಲು ಕಾಲೇಜು ಆವರಣದ ಹೊರ ಬಂದು ಗಂಟೆಗಳ ಕಾಲ ಪ್ರತಿಭಟಿಸಿದ್ದಾರೆ.

ಕಾಲೇಜು ಆವರಣದಲ್ಲಿ ಕೈಗಳಲ್ಲಿ ಕೋಲು ಹಿಡಿದುಕೊಂಡು ಅಡ್ಡಾಡುತ್ತಿದ್ದ ಕಾರ್ಯಕರ್ತರನ್ನು ತೋರಿಸುವ ವೀಡಿಯೋವೊಂದನ್ನೂ ಕೆಲ ವಿದ್ಯಾರ್ಥಿಗಳು ಶೇರ್ ಮಾಡಿದ್ದಾರೆ.
ಈ ಘಟನೆ ಬಗ್ಗೆ ಕಾಲೇಜು ಯಾವುದೇ ದೂರು ನೀಡಿಲ್ಲ ಎಂದು ಡಿಸಿಪಿ (ಕೇಂದ್ರ ದಿಲ್ಲಿ) ಮಂಜೀತ್ ರಂಧವ ಹೇಳಿದ್ದಾರೆ ಹಾಗೂ ಹಿಂಸೆ ತಡೆಗಟ್ಟಲು ಕಾಲೇಜು ಆವರಣದ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.

ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ಶಕ್ತಿ ಸಿಂಗ್ ಎಬಿವಿಪಿ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News