ಅತಿವೃಷ್ಟಿ ಹಾನಿ ಪರಿಶೀಲನೆಗೆ ಕೇಂದ್ರದ ತಂಡ: ಸಚಿವ ಆರ್.ವಿ.ದೇಶಪಾಂಡೆ

Update: 2018-09-11 12:38 GMT

ಬೆಂಗಳೂರು, ಸೆ.11: ರಾಜ್ಯದ ಮಡಿಕೇರಿ, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಉಂಟಾದ ಅತಿವೃಷ್ಟಿ ಹಾನಿ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಸರಕಾರದ ಆರು ಮಂದಿ ಅಧಿಕಾರಿಗಳ ತಂಡ ಇಂದು ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೆ.12 ಹಾಗೂ 13ರಂದು ಈ ಅಧಿಕಾರಿಗಳು ಎರಡು ತಂಡಗಳಾಗಿ ಮಡಿಕೇರಿ ಹಾಗೂ ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಕೇಂದ್ರ ಸರಕಾರದ ಅಧಿಕಾರಿಗಳ ತಂಡದ ಜೊತೆಗೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಇರುತ್ತಾರೆ. ನೆರೆ ಹಾವಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಶೀಘ್ರವೇ ಮೃತಪಟ್ಟಿರುವವರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡುತ್ತೇವೆ ಎಂದು ಅವರು ಹೇಳಿದರು.

ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯದ ಕೆಲ ಭಾಗ, ಗದಗ, ಕಲಬುರ್ಗಿ, ಬಿಜಾಪುರ, ಬಳ್ಳಾರಿಗಳಲ್ಲಿ ಮಳೆಯ ಅಭಾವ ಉಂಟಾಗಿದೆ. 30 ಜಿಲ್ಲೆಗಳಿಗೂ 240 ಕೋಟಿ ರೂ.ಗಳನ್ನು ಎಸ್‌ಡಿಆರ್‌ಎಫ್ ಅಡಿಯಲ್ಲಿ ಬಿಡುಗಡೆ ಮಾಡಿದ್ದೇವೆ. ಕೊಡಗು, ದಕ್ಷಿಣ ಕನ್ನಡ, ಮಲೆನಾಡು ಜಿಲ್ಲೆಗಳಿಗೆ 200 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಆ.30ರಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ರನ್ನು ಭೇಟಿ ಮಾಡಿ ಅತಿವೃಷ್ಟಿಗೆ ಪರಿಹಾರ ಒದಗಿಸುವಂತೆ ಬೇಡಿಕೆ ಇಟ್ಟಿದ್ದೆವು. ನಿನ್ನೆ ಪ್ರಧಾನಿಯನ್ನು ಭೇಟಿ ಮಾಡಿ ಅತಿವೃಷ್ಟಿ ಜೊತೆ, ಅನಾವೃಷ್ಟಿಯ ಚಿತ್ರಣವನ್ನು ಮುಂದಿಟ್ಟಿದ್ದೇವೆ. ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿಗೆ 43 ಕೋಟಿ ರೂ.ರಾಜ್ಯದಿಂದ ಬಿಡುಗಡೆ ಮಾಡುತ್ತಿದ್ದೇವೆ. ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು 15 ಕೋಟಿ ರೂ.ಬಿಡುಗಡೆ ಮಾಡಿದ್ದೇವೆ ಎಂದು ದೇಶಪಾಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News