ಮಣ್ಣಿನ ಗಣೇಶ ಮೂರ್ತಿಗಳನ್ನು ಪೂಜಿಸಿ, ಮಾಲಿನ್ಯ ತಪ್ಪಿಸಿ: ಮಾಜಿ ಸಚಿವ ರಾಮಲಿಂಗಾರೆಡ್ಡಿ

Update: 2018-09-11 12:41 GMT

ಬೆಂಗಳೂರು, ಸೆ.11: ಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಗಣೇಶ ಹಬ್ಬದ ಅಂಗವಾಗಿ ಮಣ್ಣಿನಿಂದ ತಯಾರಿಸಿದ ಮೂರು ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕಿ ಸೌಮ್ಯರೆಡ್ಡಿ ಪರಿಸರ ಸ್ನೇಹಿ ಗಣೇಶಗಳನ್ನು ಪೂಜಿಸುವಂತೆ ಮನವಿ ಮಾಡಿದರು.

ಮಣ್ಣಿನ ಗಣೇಶಕ್ಕೆ ಜೈ ಅನ್ನೋಣ- ಪರಿಸರ ಮಾಲಿನ್ಯ ತಡೆಗಟ್ಟೋಣ ಎಂಬ ಅರ್ಥಪೂರ್ಣ ಸಂದೇಶದೊಂದಿಗೆ ವಿವಿಧ ಶಾಲಾ ವಿದ್ಯಾರ್ಥಿಗಳೊಂದಿಗೆ ಬೃಹತ್ ಜಾಗೃತಿ ಅಭಿಯಾನದ ಜಾಥ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಗಣೇಶ ಹಬ್ಬದ ಆಚರಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ಎಲ್ಲ ಕಡೆಗಳಲ್ಲಿ ಗಣೇಶಮೂರ್ತಿಗಳನ್ನು ಕೂರಿಸಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ಆದರೆ, ಪೂಜಿಸಲು ಇಡುವ ಗಣೇಶ ಮೂರ್ತಿಗಳು ಎರಡು-ಮೂರು ದಿನಗಳ ನಂತರ ನೀರಿಗೆ ಬಿಡಲಾಗುತ್ತದೆ. ಹೀಗಾಗಿ, ನೀರಿಯಲ್ಲಿ ಕರೆಗದೆ, ಪರಿಸರ ಮಲಿನಗೊಳ್ಳುವ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಬದಲಿಗೆ, ಪರಿಸರ ಸ್ನೇಹಿ ಗಣೇಶಗಳನ್ನು ಬಳಕೆ ಮಾಡೋಣ ಎಂದು ಕರೆ ನೀಡಿದರು.

ಪಿಒಪಿ ಗಣೇಶ ಮೂರ್ತಿಗಳು ಹೊರಗಿನಿಂದ ಕಣ್ಣಿಗೆ ಸುಂದರವಾಗಿ ಕಾಣಬಹುದು. ಆದರೆ, ಅದರಲ್ಲಿ ರಾಸಾಯನಿಕಗಳನ್ನು ಬಳಕೆ ಮಾಡಲಾಗಿರುತ್ತದೆ. ಅದನ್ನು ನೀರಿಗೆ ಬಿಡುವುದರಿಂದ ನೀರು ಕಲುಷಿತಗೊಂಡು ಜನ ಸಾಮಾನ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಮಲಿನಮುಕ್ತ ಹಬ್ಬವನ್ನು ಆಚರಣೆ ಮಾಡೋಣ ಎಂದು ತಿಳಿಸಿದರು.

ಶಾಸಕಿ ಸೌಮ್ಯರೆಡ್ಡಿ ಮಾತನಾಡಿ, ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ್ದ ದೊಡ್ಡ ಗಣೇಶ ಮೂರ್ತಿಗಳನ್ನು ಪೂಜಿಸಿ ಕೆರೆಗಳಲ್ಲಿ ವಿಸರ್ಜನೆ ಮಾಡಿದಾಗ ನೀರಿನಲ್ಲಿ ಮೂರ್ತಿಗಳು ಲೀನವಾಗುವುದಿಲ್ಲ. ನೀರಿನ ಮೇಲೆ ತೇಲುತ್ತಿರುತ್ತದೆ. ಹೀಗಾಗಿ ಎಲ್ಲರೂ ಮಣ್ಣಿನಿಂದ ತಯಾರಿಸಿದ್ದ ಗಣೇಶ ಮೂರ್ತಿಗಳನ್ನು ಪೂಜಿಸಿ ಪರಿಸರ ಉಳಿಸಿ ಎಂದು ಹೇಳಿದರು.

ಜೆ.ಪಿ.ನಗರದಲ್ಲಿ ಪಾಲಿಕೆ ಸದಸ್ಯ ಎನ್.ನಾಗರಾಜು ಹಾಗೂ ಶಾಲಾ ವಿದ್ಯಾರ್ಥಿ ಗಳೊಂದಿಗೆ ಸೇರಿ ಮಣ್ಣಿನ ಗಣೇಶನನ್ನು ಹಿಡಿದು ರ್ಯಾಲಿ ನಡೆಸಿ ಜಾಗೃತಿ ಮೂಡಿಸಲಾಯಿತು. ನೀರಿಯಲ್ಲಿ ಕರಗುವಂತಹ ಮಣ್ಣಿನ ಮೂರ್ತಿಯನ್ನಷ್ಟೇ ಬಳಸಿ ಎಂದು ಜನರಲ್ಲಿ ಅರಿವು ಮೂಡಿಸಿದರು. ಬಿಟಿಎಮ್ ಲೇಔಟ್‌ನಲ್ಲಿ ಮೂರು ಸಾವಿರ ಮಣ್ಣಿನ ಗಣೇಶಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಹಂಚಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News