ರಾಜ್ಯದ 86 ತಾಲೂಕುಗಳು ಬರಪೀಡಿತ: ಸಚಿವ ಆರ್.ವಿ.ದೇಶಪಾಂಡೆ

Update: 2018-09-11 13:07 GMT

ಬೆಂಗಳೂರು, ಸೆ.11: ರಾಜ್ಯದಲ್ಲಿ 16 ಜಿಲ್ಲೆಗಳ 89 ತಾಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಕಂಡು ಬಂದಿದೆ. ಕೇಂದ್ರ ಸರಕಾರವು 2016ರಲ್ಲಿ ಹೊರತಂದಿರುವ ಬರ ಕೈಪಿಡಿಯಲ್ಲಿ ನಿಗದಿಪಡಿಸಿರುವ ವಿವಿಧ ಮಾನದಂಡಗಳ ಪ್ರಕಾರ ರಾಜ್ಯದ 86 ತಾಲೂಕುಗಳನ್ನು ಬರಪೀಡಿತವೆಂದು ಗುರುತಿಸಲಾಗಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಅವಲೋಕಿಸಲು ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ತಮ್ಮ ನೇತೃತ್ವದಲ್ಲಿ ನಡೆದ ಸಂಪುಟ ಉಪ ಸಮಿತಿಯ ಸಭೆಯ ಬಳಿಕ ಅವರು ಮಾತನಾಡಿದರು.

ಕೇಂದ್ರ ಸರಕಾರದ ಮಾನದಂಡಗಳ ಪ್ರಕಾರ ಯಾವುದೇ ಒಂದು ಪ್ರದೇಶದಲ್ಲಿ ಬರ ಪರಿಸ್ಥಿತಿ ನೆಲೆಸಿದೆ ಎಂದು ನಿರ್ಧರಿಸಲು ವಾಡಿಕೆಯ ಕನಿಷ್ಠ ಶೇ.60ಕ್ಕಿಂತ ಕಡಿಮೆ ಮಳೆ, ಸತತ ಮೂರು ವಾರ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶುಷ್ಕ ವಾತಾವರಣ, ಕೃಷಿ ಬೆಳೆಯ ವಾಡಿಕೆಯ ಶೇ.75ಕ್ಕಿಂತ ಕಡಿಮೆ ಬಿತ್ತನೆ, ಉಪಗ್ರಹ ಆಧಾರಿತ ಬೆಳೆ ವಿಶ್ಲೇಷಣೆ, ಶೇ.50ಕ್ಕಿಂತ ಹೆಚ್ಚಿನ ತೇವಾಂಶ ಕೊರತೆ ಮತ್ತು ಜಲಾಶಯಗಳ ಹಾಗೂ ಅಂತರ್ಜಲ ಮಟ್ಟವನ್ನು ತಿಳಿಸುವ ಜಲ ಸಂಪನ್ಮೂಲ ಸೂಚ್ಯಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಅವರು ವಿವರಿಸಿದರು.

ಈ ವರ್ಷದ ಮೇ 30ಕ್ಕೆ ರಾಜ್ಯವನ್ನು ಪ್ರವೇಶಿಸಿದ ಮುಂಗಾರು ಮಳೆಯು ಜೂನ್ 8ರ ಹೊತ್ತಿಗೆ ಇಡೀ ರಾಜ್ಯವನ್ನು ವ್ಯಾಪಿಸಿಕೊಂಡಿದ್ದು ನಿಜ. ಆದರೆ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ತುಂಬಾ ಮಳೆಯಾಗಿದೆ. ಉಳಿದಂತೆ ಬಹುತೇಕ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬರದ ಕರಾಳ ಛಾಯೆ ಕಾಣಿಸಿಕೊಂಡಿದೆ ಎಂದು ದೇಶಪಾಂಡೆ ಹೇಳಿದರು.

ಇಡೀ ರಾಜ್ಯವನ್ನು ಪರಿಗಣಿಸಿದರೆ ಜೂ.1ರಿಂದ ಸೆ.6ರವರೆಗಿನ ಅವಧಿಯಲ್ಲಿ 721 ಮಿಲಿ ಮೀಟರ್ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.2ರಷ್ಟು ಹೆಚ್ಚು. ಆದರೆ, ಈ ಅವಧಿಯಲ್ಲಿ 88 ತಾಲೂಕುಗಳಲ್ಲಿ ಸಾಧಾರಣ ಮಳೆ ಕೊರತೆ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆ ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಇದೇ ರೀತಿಯಲ್ಲಿ 104 ತಾಲೂಕುಗಳಲ್ಲಿ ಮೂರು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಶುಷ್ಕ ವಾತಾವರಣ, 115 ತಾಲೂಕುಗಳಲ್ಲಿ ತೇವಾಂಶ ಕೊರತೆ, 44 ತಾಲೂಕುಗಳಲ್ಲಿ ಶೇ.75ಕ್ಕಿಂತ ಕಡಿಮೆ ಬಿತ್ತನೆ, ಉಪಗ್ರಹ ಆಧಾರಿತ ಬೆಳೆ ವಿಶ್ಲೇಷಣೆಯನ್ನು ಗಮನಿಸಿದಾಗ 119 ತಾಲೂಕುಗಳಲ್ಲಿ ತೀವ್ರ ಮತ್ತು ಸಾಧಾರಣಾ ಬೆಳೆ ಕುಂಠಿತಗೊಂಡಿರುವುದು ಹಾಗೂ 35 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದು ಕಂಡು ಬಂದಿದೆ ಎಂದು ದೇಶಪಾಂಡೆ ಹೇಳಿದರು.

8 ಸಾವಿರ ಕೋಟಿ ರೂ.ನಷ್ಟ: ಮಳೆಯ ಕೊರತೆಯಿಂದಾಗಿ ರಾಜ್ಯದ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಒಣಗಿ ಹೋಗಿದ್ದು, ಅಂದಾಜು 8 ಸಾವಿರ ಕೋಟಿ ರೂ.ಮೌಲ್ಯದಷ್ಟು ನಷ್ಟ ಸಂಭವಿಸಿದೆ. ಬರ ಪರಿಸ್ಥಿತಿಯಿಂದಾಗಿ ಕುಡಿಯುವ ನೀರು ಮತ್ತು ಮೇವಿನ ಕೊರತೆ ಕಾಣಿಸಿಕೊಂಡಿದ್ದು, ಗ್ರಾಮೀಣ ಉದ್ಯೋಗದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದರು.

ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯಿಂದಾಗಿ ಅಂದಾಜು 3705 ಕೋಟಿ ರೂ.ಗಳಿಗಿಂತಲೂ ಹೆಚ್ಚು ನಷ್ಟ ಸಂಭವಿಸಿದೆ. ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು 1199.89 ಕೋಟಿ ರೂ.ಗಳನ್ನು ಕೊಡುವಂತೆ ಪ್ರಧಾನಿ ಮೋದಿಯನ್ನು ಸೋಮವಾರ ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ನಿಯೋಗ ಮನವಿ ಮಾಡಿದೆ ಎಂದು ದೇಶಪಾಂಡೆ ಹೇಳಿದರು.

ಬರಪೀಡಿತ ತಾಲೂಕುಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಸಿರಾ, ತಿಪಟೂರು, ತುಮಕೂರು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು, ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ, ಹರಿಹರ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ.

ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು, ಸಿರಗುಪ್ಪ, ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗ, ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಾನ್ವಿ, ರಾಯಚೂರು, ಸಿಂಧನೂರು, ಕಲಬುರ್ಗಿ ಜಿಲ್ಲೆಯ ಅಫ್ಝಲ್‌ಪುರ, ಚಿಂಚೋಳಿ, ಚಿತ್ತಾಪುರ, ಕಲಬುರ್ಗಿ, ಜೇವರ್ಗಿ, ಸೇಡಂ.

ಯಾದಗಿರಿ ಜಿಲ್ಲೆಯ ಶಹಾಪುರ, ಶೋರಾಪುರ, ಯಾದಗಿರಿ, ಬೀದರ್ ಜಿಲ್ಲೆಯ ಬೀದರ್, ಹುಮ್ನಾಬಾದ್, ಬೆಳಗಾವಿ ಜಿಲ್ಲೆಯ ರಾಮದುರ್ಗ, ಸವದತ್ತಿ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಹುನಗುಂದ, ಜಮಖಂಡಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಬಿಜಾಪುರ, ಇಂಡಿ, ಮುದ್ದೇಬಿಹಾಳ, ಸಿಂಧಗಿ, ಗದಗ ಜಿಲ್ಲೆಯ ಗದಗ, ಮುಂಡರಗಿ, ನರಗುಂದ, ರೋಣ, ಶಿರಾಹಟ್ಟಿ.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಹಾಸನ ಜಿಲ್ಲೆಯ ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ ಎಂದು ದೇಶಪಾಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News