ಬಂದ್ ಯಾವುದೇ ಸಮಸ್ಯೆಗೆ ಪರಿಹಾರವಲ್ಲ: ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್‌ಎಸ್. ಶೆಟ್ಟಿ

Update: 2018-09-11 13:38 GMT

ಬೆಂಗಳೂರು, ಸೆ.11: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಪ್ರತಿ ಲೀಟರ್ ಪೆಟ್ರೋಲ್‌ಗೆ 83.69 ರೂ.ಹಾಗೂ ಡೀಸೆಲ್‌ಗೆ 74.84 ರೂ.ರಷ್ಟಾಗಿದೆ. ತೈಲ ಬೆಲೆ ಹೆಚ್ಚಳವು ಇತರ ಅಗತ್ಯವಸ್ತುಗಳ ಬೆಲೆ ಏರಿಕೆಗೂ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಂದ್ ಮಾಡುವುದು ಸ್ವಾಭಾವಿಕ. ಆದರೆ ಬಂದ್ ಆಚರಣೆ ಮಾಡುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತೈಲ ಬೆಲೆ ಏರಿಕೆಯಿಂದ ಆಗುವ ಸಂಕಷ್ಟ ಹಾಗೂ ಬವಣೆಗಳು ರೈತ ಸಮೂಹ, ಕೈಗಾರಿಕೋದ್ಯಮ, ವ್ಯಾಪಾರಿ ಸಮೂಹ ಹಾಗೂ ಜನಸಾಮಾನ್ಯರ ಮೇಲೆ ತೀವ್ರವಾದ ಪರಿಣಾಮವನ್ನು ಬೀರುವುದರಿಂದ ವ್ಯವಹಾರ ಮತ್ತು ಜನಜೀವನ ಕಷ್ಟಕರವಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಹಬ್ಬಗಳು ಇರುವುದರಿಂದ ರಜಾ ದಿನಗಳು ಹೆಚ್ಚಾಗಿಯೇ ಇವೆ. ವ್ಯಾಪಾರ ವ್ಯವಹಾರಗಳು ನಡೆಯುವ ಇಂತಹ ಸಮಯದಲ್ಲಿ ಬಂದ್‌ಗಳನ್ನು ಮಾಡುವುದರಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ. ಕೈಗಾರಿಕೆಗಳು ಹಾಗೂ ವ್ಯಾಪಾರಿ ಸಮೂಹ ವಾರ್ಷಿಕ ಸುಮಾರು 65 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕೆಗಳು ಮತ್ತು ವ್ಯಾಪಾರಿ ಸಮೂಹ ಒಂದು ದಿನಕ್ಕೆ ಸುಮಾರು 160 ಕೋಟಿ ರೂ.ಗಳನ್ನು ರಾಜ್ಯ ಸರಕಾರದ ಬೊಕ್ಕಸಕ್ಕೆ ನೀಡುತ್ತವೆ. ಒಂದು ದಿನದ ಭಾರತ ಬಂದ್ ಮಾಡುವುದರಿಂದ ಸುಮಾರು 160 ಕೋಟಿ ರೂ.ಗಳ ತೆರಿಗೆ ಹಣ ರಾಜ್ಯ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಸುಧಾಕರ್ ಶೆಟ್ಟಿ ಹೇಳಿದ್ದಾರೆ.

ಇದಲ್ಲದೇ, ರಾಜ್ಯ ಸರಕಾರವು ಸುಮಾರು 11 ಸಾವಿರ ಕೋಟಿ ರೂ.ಗಳ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ತೆರಿಗೆಯ ರೂಪದಲ್ಲಿ ಬೊಕ್ಕಸಕ್ಕೆ ಪಡೆಯುತ್ತದೆ. ಇಂತಹ ಬಂದ್‌ಗಳಿಂದ ಪ್ರತಿದಿನಕ್ಕೆ ಸುಮಾರು 30.6 ಕೋಟಿ ರೂ.ಗಳ ನಷ್ಟ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರದ ತೆರಿಗೆ ಪೆಟ್ರೋಲಿನ ಪ್ರತಿ ಲೀಟರ್‌ಗೆ 19.48 ರೂ.ಹಾಗೂ ಡೀಸೆಲಿನ ಪ್ರತಿ ಲೀಟರ್‌ಗೆ 15.33 ರೂ. ಇದರ ಪರಿಮಾಣ ಶೇ.23.27 ಹಾಗೂ ಶೇ.20.58 ರಷ್ಟು ಇದೆ. ರಾಜ್ಯ ಸರಕಾರದ ತೆರಿಗೆಯ ಪ್ರಮಾಣವು ಪ್ರತಿ ಲೀಟರ್ ಪೆಟ್ರೋಲಿನ ಮೇಲೆ 32 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 21 ರೂ.ಆಗಿರುತ್ತದೆ ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಸರಕಾರವು 2018-19ನೇ ಸಾಲಿನ ಆಯವ್ಯಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ದರದ ಮೇಲೆ ಶೇ.2ರಷ್ಟು ತೆರಿಗೆಯನ್ನು ಜಾಸ್ತಿ ಮಾಡಿದ್ದು, ಇದರಿಂದ ಕೈಗಾರಿಕೆ, ವ್ಯಾಪಾರ ಸಮೂಹ ಹಾಗೂ ಸಾಮಾನ್ಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ತಮ್ಮ ರಾಜ್ಯದ ತೈಲ ತೆರಿಗೆಯನ್ನು ಕಡಿಮೆ ಮಾಡಿದ್ದು, ನಿನ್ನೆಯಷ್ಟೇ, ರಾಜಸ್ತಾನ ಸರಕಾರವು ತನ್ನ ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಇಂತಹ ನಿರ್ಧಾರವನ್ನು ನಮ್ಮ ರಾಜ್ಯ ಸರಕಾರ ತೆಗೆದುಕೊಂಡಲ್ಲಿ ತೈಲ ಬೆಲೆಯು ಕಡಿಮೆಯಾಗಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ ಕೇಂದ್ರ ಸರಕಾರವೂ ತನ್ನ ಧೋರಣೆಯನ್ನು ಬದಲಿಸಿ, ತನ್ನ ಪಾಲಿನ ತೆರಿಗೆಯನ್ನೂ ಕಡಿಮೆ ಮಾಡಿ ರಾಜ್ಯ ಸರಕಾರದೊಂದಿಗೆ ಕೈಜೋಡಿಸಿದಲ್ಲಿ ತೈಲ ಬೆಲೆ ಇಳಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸುಧಾಕರ್ ಶೆಟ್ಟಿ ಹೇಳಿದ್ದಾರೆ.

ಇಂತಹ ಸೂಕ್ಷ್ಮ ವಿಷಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ನೇಹಭಾವದಿಂದ ಇತ್ಯರ್ಥ ಮಾಡಬೇಕೇ ವಿನಃ ಬಂದ್‌ನಂತಹ ಆಚರಣೆಗಳಿಗೆ ಪ್ರಚೋದನೆ ನೀಡುವುದು ಬೊಕ್ಕಸಕ್ಕೆ ಬಾರಿ ಪ್ರಮಾಣದ ನಷ್ಟವನ್ನುಂಟು ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ರಾಜ್ಯ ಸಾರಿಗೆ ಸಚಿವರು ಪ್ರಯಾಣದರವನ್ನು ಸುಮಾರು ಶೇ.18ರಷ್ಟು ಹೆಚ್ಚು ಮಾಡುವುದಾಗಿ ಸೂಚನೆ ನೀಡಿದ್ದು, ಇದು ಕೈಗಾರಿಕೆ, ವ್ಯಾಪಾರ ಸಮೂಹ ಹಾಗೂ ಜನ ಸಾಮಾನ್ಯರಿಗೆ ಗಾಯದ ಬರೆ ಎಳೆದಂತಾಗಲಿದೆ ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News