ಬಿಹಾರ ಸರಕಾರ, ಸಿಬಿಐಗೆ ಸುಪ್ರೀಂ ಕೋರ್ಟ್‌ನ ನೋಟಿಸ್

Update: 2018-09-11 14:20 GMT

ಹೊಸದಿಲ್ಲಿ,ಸೆ.11: ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂದು ಆರೋಪಿಸಲಾಗಿರುವ ಮುಝಫ್ಫರಪುರ ಆಶ್ರಯಧಾಮ ಪ್ರಕರಣದ ತನಿಖೆಯ ಕುರಿತು ಮಾಧ್ಯಮಗಳು ವರದಿ ಮಾಡುವುದನ್ನು ನಿಷೇಧಿಸಿರುವ ಆ.23ರ ಪಾಟ್ನಾ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಬಿಹಾರ ಸರಕಾರ ಮತ್ತು ಸಿಬಿಐಗೆ ನೋಟಿಸ್‌ಗಳನ್ನು ಹೊರಡಿಸಿದೆ. ಪಾಟ್ನಾದ ಪತ್ರಕರ್ತರೋರ್ವರು ಈ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ ಗುಪ್ತಾ ಅವರ ಪೀಠವು ವಿಚಾರಣೆಯನ್ನು ಸೆ.18ಕ್ಕೆ ನಿಗದಿಗೊಳಿಸಿದ್ದು,ಅದಕ್ಕೂ ಮುನ್ನ ಉತ್ತರಗಳನ್ನು ಸಲ್ಲಿಸುವಂತೆ ರಾಜ್ಯ ಸರಕಾರ ಮತ್ತು ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಬಿಐಗೆ ಸೂಚಿಸಿದೆ.

ತನ್ನ ಮುಂದೆ ವಿಚಾರಣೆಗೆ ಬಾಕಿಯಿರುವ ಪ್ರಕರಣದಲ್ಲಿ ಮಹಿಳಾ ನ್ಯಾಯವಾದಿಯೋರ್ವರನ್ನು ಅಮಿಕಸ್ ಕ್ಯುರೆ ಆಗಿ ನೇಮಕಗೊಳಿಸಿದ್ದ ಆ.29ರ ಪಾಟ್ನಾ ಹೈಕೋರ್ಟ್ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ. ಸಂತ್ರಸ್ತ ಮಹಿಳೆಯರ ಪುನರ್ವಸತಿ ಉದ್ದೇಶಕ್ಕಾಗಿ ಅವರು ವಾಸವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅವರ ಸಂದರ್ಶನ ನಡೆಸುವಂತೆ ಉಚ್ಚ ನ್ಯಾಯಾಲಯವು ಮಹಿಳಾ ನ್ಯಾಯವಾದಿಗೆ ಸೂಚಿಸಿತ್ತು.

ರಾಜ್ಯ ಸರಕಾರದಿಂದ ಅನುದಾನ ಪಡೆಯುತ್ತಿದ್ದ ಎನ್‌ಜಿಒದ ಮುಖ್ಯಸ್ಥ ಬೃಜೇಶ ಠಾಕೂರ್ ನಡೆಸುತ್ತಿದ್ದ ಆಶ್ರಯಧಾಮದಲ್ಲಿ 30ಕ್ಕೂ ಅಧಿಕ ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆದಿವೆ ಎನ್ನಲಾಗಿದೆ.

ಉಚ್ಚ ನ್ಯಾಯಾಲಯದ ಆದೇಶವು ಆಶ್ರಯಧಾಮ ಪ್ರಕರಣದಲ್ಲಿ ಮಾಧ್ಯಮಗಳ ವರದಿಗಾರಿಕೆಯ ಮೇಲೆ ಸಾರಾಸಗಟು ನಿಷೇಧವನ್ನು ಹೇರಿರುವುದರಿಂದ ಅದು ಸಂಪೂರ್ಣ ತಪ್ಪು ಆದೇಶವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ತನಿಖೆಯ ವಿವರಗಳು ಸೋರಿಕೆಯಾಗುತ್ತಿರುವ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಪಾಟ್ನಾ ಉಚ್ಚ ನ್ಯಾಯಾಲಯವು ತನಿಖೆಯ ಬಗ್ಗೆ ವರದಿ ಮಾಡುವುದು ಅದಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ,ಹೀಗಾಗಿ ಪ್ರಕರಣದ ತನಿಖೆಯ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ತಾಕೀತು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News