ಡಿಕೆಶಿ-ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ ರಮೇಶ್ ಜಾರಕಿಹೊಳಿ?

Update: 2018-09-11 14:35 GMT
ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು, ಸೆ.11: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನಗೊಂಡಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ರನ್ನು ಮಂಗಳವಾರ ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ದಿನೇಶ್‌ ಗುಂಡೂರಾವ್ ಹಾಗೂ ಪರಮೇಶ್ವರ್‌ಗೆ ಮಾಹಿತಿ ನೀಡಿದ ರಮೇಶ್ ಜಾರಕಿಹೊಳಿ, ಸಚಿವ ಶಿವಕುಮಾರ್ ಹಾಗೂ ಲಕ್ಷ್ಮಿಹೆಬ್ಬಾಳ್ಕರ್ ವರ್ತನೆ ಕುರಿತು ತಮ್ಮ ಅತೃಪ್ತಿ ಹೊರಹಾಕಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಬಳಿ ಎಲ್ಲ ಮಾಹಿತಿಯನ್ನು ಪಡೆದ ಉಭಯ ನಾಯಕರು, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯ ಸರಕಾರ ಹಾಗೂ ಪಕ್ಷಕ್ಕೆ ಮುಜುಗರವಾಗುವಂತಹ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಲಹೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಮ್ಮಲ್ಲಿರುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿರುವ ಕುರಿತು ಉಭಯ ನಾಯಕರು, ರಮೇಶ್ ಜಾರಕಿಹೊಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ನನಗೆ ಪಕ್ಷದ ಬಗ್ಗೆ ಯಾವುದೇ ಮುನಿಸಿಲ್ಲ. ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಯಾವುದೆ ಕಿತ್ತಾಟ ನಡೆದಿಲ್ಲ. ಅದೊಂದು ಸಣ್ಣ ಘಟನೆಯಷ್ಟೇ, ನಾವೇ ಪರಸ್ಪರ ಚರ್ಚಿಸಿ ಅದನ್ನು ಇತ್ಯರ್ಥಪಡಿಸಿಕೊಂಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ನಮಗೆ ಮುಖಭಂಗ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಆದರೆ, ಈ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಾತ್ರ ಏನು ಇರಲಿಲ್ಲ. ಜಾಮ್ದಾರ್, ಪರಶುರಾಮ್ ಎಲ್ಲರೂ ನಮ್ಮ ಅಭ್ಯರ್ಥಿಗಳೇ ಎಂದರು.

ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಒಂದು ಸೀಟು ಮಾತ್ರ ಇತ್ತು. ನಾವು ಬಯಸಿದಂತೆಯೇ ಅಲ್ಲಿ ನಡೆದಿದೆ. ಮುಖಭಂಗವಾಗಿದ್ದರೆ ಅಲ್ಲಿಯೇ ರಾಜೀನಾಮೆ ನೀಡುತ್ತಿದ್ದೆವು ಎಂದ ಅವರು, ಮಹಾರಾಷ್ಟ್ರ ಸರಕಾರದ ಸಚಿವರನ್ನು ಭೇಟಿ ಮಾಡಿದ ವಿಚಾರ ಕುರಿತು ಕೇಳಿದ ಪ್ರಶ್ನೆಗೆ, ಮಹಾರಾಷ್ಟ್ರದಲ್ಲಿ ನಮ್ಮ ಕಬ್ಬಿನ ಕಾರ್ಖಾನೆಗಳಿವೆ. ಹಾಗಾಗಿ ಅಲ್ಲಿನ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದರು.

ಬೆಳಗಾವಿಯಲ್ಲಿ ಹಿಂದುತ್ವದ ರಾಜಕಾರಣ ಪ್ರಬಲವಾಗಿದೆ. ಆದುದರಿಂದ, ಅಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಹಾಕಬೇಕು. ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸತೀಶ್ ಜಾರಕಿಹೊಳಿ ಅರ್ಹರಿದ್ದಾರೆ. ಅವರು ಸ್ಪರ್ಧಿಸದಿದ್ದರೆ ನಾನು ಅಭ್ಯರ್ಥಿಯಾಗುತ್ತೇನೆ. ಇಲ್ಲವೇ, ವಿವೇಕ್‌ ರಾವ್ ಪಾಟೀಲ್‌ರನ್ನು ಕಣಕ್ಕಿಳಿಸುವಂತೆ ಮೂವರ ಹೆಸರನ್ನು ಕೆಪಿಸಿಸಿಗೆ ಕೊಟ್ಟಿದ್ದೇವೆ.

-ರಮೇಶ್ ಜಾರಕಿಹೊಳಿ, ಪೌರಾಡಳಿತ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News