ವಕ್ಫ್ ಆಸ್ತಿಗಳ ಖಾತೆ ಮಾಡಲು ಸಚಿವ ಝಮೀರ್ ಅಹ್ಮದ್ ಸೂಚನೆ

Update: 2018-09-11 15:18 GMT

ಬೆಂಗಳೂರು, ಸೆ.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಖಾತೆಗಳನ್ನು ಸಿದ್ಧಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ಅಹ್ಮದ್‌ಖಾನ್ ಸೂಚನೆ ನೀಡಿದ್ದಾರೆ.

ಮಂಗಳವಾರ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಮೇಯರ್ ಸಂಪತ್‌ರಾಜ್, ಬಿಬಿಎಂಪಿ ಅಧಿಕಾರಿಗಳು ಹಾಗೂ ವಕ್ಫ್ ಬೋರ್ಡ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸುಮಾರು 40 ಪ್ರಮುಖ ವಕ್ಫ್ ಆಸ್ತಿಗಳ ಖಾತೆಯನ್ನು ಮುಂದಿನ 15 ದಿನಗಳಲ್ಲಿ ಸಿದ್ಧಪಡಿಸಿ, ಜಾರಿಗೊಳಿಸುವಂತೆ ಸಭೆಯಲ್ಲಿ ಅವರು ಸೂಚಿಸಿದರು. ವಕ್ಫ್ ಅಧಿಕಾರಿಗಳು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಶುಜಾವುದ್ದೀನ್ ನೀಡಿರುವ ಮಾಹಿತಿಯನ್ನು ಆಧರಿಸಿ ಈ ವಿಷಯವನ್ನು ಮೇಯರ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಅವರು ತಿಳಿಸಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು 60 ಪ್ರಮುಖ ವಕ್ಫ್ ಆಸ್ತಿಗಳಿದ್ದು, ಈ ಪೈಕಿ 20 ಆಸ್ತಿಗಳಿಗೆ ಮಾತ್ರ ಖಾತೆಯಾಗಿದೆ. ಇನ್ನು 40 ಆಸ್ತಿಗಳ ಖಾತೆಯಾಗಿಲ್ಲ. ಈ ಆಸ್ತಿಗಳನ್ನು ‘ವಕ್ಫ್‌ಬೋರ್ಡ್, ಕರ್ನಾಟಕ ಸರಕಾರ’ ಈ ಹೆಸರಿಗೆ ಖಾತೆ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತರಿಗೆ ಝಮೀರ್‌ ಅಹ್ಮದ್ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಮೇಯರ್ ಸಂಪತ್‌ ರಾಜ್, ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ವಕ್ಫ್ ಆಸ್ತಿಗಳ ದಾಖಲೆಗಳ ಪರಿಶೀಲನೆ, ಆಸ್ತಿಗಳ ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಮೇಯರ್, ವಕ್ಫ್‌ಬೋರ್ಡ್ ಸಿಇಓ, ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಜಂಟಿ ಆಯುಕ್ತರನ್ನು ಒಳಗೊಂಡ ‘ವಕ್ಫ್ ಅದಾಲತ್’ ರಚಿಸಲಾಗಿದೆ ಎಂದರು.

ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಶುಜಾವುದ್ದೀನ್ ಮಾತನಾಡಿ, ಬೆಂಗಳೂರಿನಲ್ಲಿ ವಕ್ಫ್ ಬೋರ್ಡ್‌ಗೆ ದಾನವಾಗಿ ನೀಡಿರುವ ಹಲವಾರು ಆಸ್ತಿಗಳ ಖಾತೆಗಳು ಇನ್ನೂ ಮೂಲ ಮಾಲಕರ ಹೆಸರಿನಲ್ಲೆ ಇದೆ. ಈ ಆಸ್ತಿಗಳು ವಕ್ಫ್‌ಬೋರ್ಡ್ ಹೆಸರಿಗೆ ವರ್ಗಾವಣೆಯಾಗಿಲ್ಲ ಎಂದರು.

ವಕ್ಫ್ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಇದರಿಂದ ತೊಂದರೆಯಾಗುತ್ತಿದೆ. ಸುಮಾರು 20-25 ಖಾತೆಗಳು ವಕ್ಫ್‌ಬೋರ್ಡ್ ಹೆಸರಿಗೆ ವರ್ಗಾವಣೆಯಾಗಿವೆ. ಆದರೆ, ಇನ್ನೂ ಸುಮಾರು 40 ಆಸ್ತಿಗಳ ಖಾತೆಯನ್ನು ಮಾಡಿಕೊಡಲು ಬಿಬಿಎಂಪಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಅಂಶವನ್ನು ಅವರು ಸಭೆಯ ಗಮನಕ್ಕೆ ತಂದರು.

ಈ ಹಿಂದೆ ನಡೆದ ಸಭೆಯಲ್ಲಿ ಮೇಯರ್ ನೀಡಿದ ಸೂಚನೆಯಂತೆ ಈಗಾಗಲೆ ನಾವು ಸಂಬಂಧಪಟ್ಟ ವಿಭಾಗಗಳಲ್ಲಿ ಅಗತ್ಯ ಅರ್ಜಿ, ದಾಖಲಾತಿಗಳನ್ನು ಸಲ್ಲಿಸಿದ್ದೇವೆ ಎಂದು ಶುಜಾವುದ್ದೀನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಝಮೀರ್‌ ಅಹ್ಮದ್, ಬಿಬಿಎಂಪಿ ಜಂಟಿ ಆಯುಕ್ತರು ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಖಾತೆಯನ್ನು ಕಾಲಮಿತಿಯೊಳಗೆ ವಕ್ಫ್‌ಬೋರ್ಡ್‌ಗೆ ವರ್ಗಾಯಿಸಿಕೊಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಅಶೋಕ್, ಪಶ್ಚಿಮ ವಲಯದ ಜಂಟಿ ಆಯುಕ್ತ ಚಲಪತಿ, ದಕ್ಷಿಣ ವಲಯದ ಜಂಟಿ ಆಯುಕ್ತ ವಿಶ್ವನಾಥ್, ವಕ್ಫ್ ಬೋರ್ಡ್ ಸಿಇಓ ಸರ್ಫರಾಜ್‌ ಖಾನ್, ಸರ್ವೆ ಅಧಿಕಾರಿ ಮುಜೀಬುಲ್ಲಾ ಝಫಾರಿ, ಕಾನೂನು ಅಧಿಕಾರಿ ಲಿಯಾಖತ್ ಅಲಿಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News