ಸೆ.10ರಿಂದ ಎಚ್‌ಐವಿ/ಏಡ್ಸ್ ಕಾಯ್ದೆ ಜಾರಿ: ಆರೋಗ್ಯ ಇಲಾಖೆ ಘೋಷಣೆ

Update: 2018-09-11 14:53 GMT

ಹೊಸದಿಲ್ಲಿ, ಸೆ.11: ಎಚ್‌ಐವಿ ಬಾಧಿತರ ವಿರುದ್ಧ ಉದ್ಯೋಗ ನಿರ್ವಹಿಸುವ ಸ್ಥಳದಲ್ಲಿ ಅಥವಾ ಚಿಕಿತ್ಸೆ ಪಡೆಯುವ ಸ್ಥಳದಲ್ಲಿ ತಾರತಮ್ಯದಿಂದ ವರ್ತಿಸುವುದನ್ನು ನಿಷೇಧಿಸುವ ಎಚ್‌ಐವಿ ಮತ್ತು ಏಡ್ಸ್ ಕಾಯ್ದೆ 2017ನ್ನು 2018ರ ಸೆ.10ರಿಂದ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಘೋಷಿಸಿದೆ.

ಉದ್ಯೋಗ ಪಡೆಯುವಾಗ ಅಥವಾ ಕರ್ತವ್ಯ ನಿರ್ವಹಣೆ ಸಂದರ್ಭ ತನ್ನ ಎಚ್‌ಐವಿ ಸ್ಥಿತಿಯ ಮಾಹಿತಿ ಬಹಿರಂಗಗೊಳಿಸುವಂತೆ ಯಾವುದೇ ವ್ಯಕ್ತಿಯನ್ನು ಬಲವಂತ ಪಡಿಸುವಂತಿಲ್ಲ(ನ್ಯಾಯಾಲಯದ ಆದೇಶ ಅಥವಾ ಸ್ವಯಂ ಒಪ್ಪಿಗೆ ಹೊರತುಪಡಿಸಿ) ಎಂದು ಕಾಯ್ದೆ ತಿಳಿಸಿದೆ. ಎಚ್‌ಐವಿ/ಏಡ್ಸ್ ಬಾಧಿತರ ವಿರುದ್ಧ ಪಕ್ಷಪಾತ ತೋರುವ ವರಿಗೆ 2 ವರ್ಷದ ಜೈಲುಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಕಾಯ್ದೆ ಉಲ್ಲಂಘನೆಯ ದೂರುಗಳ ತನಿಖೆಗೆ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ಕುರಿತು ಮಾಹಿತಿ ನೀಡಲು ಪ್ರತಿಯೊಂದು ರಾಜ್ಯವೂ ಅಧಿಕಾರಿಯೊಬ್ಬರನ್ನು ನೇಮಿಸಲಿದೆ.

ಅಲ್ಲದೆ ಎಚ್‌ಐವಿ/ಏಡ್ಸ್ ಸಂಬಂಧಿತ ರೋಗನಿರ್ಣಯದ ಸಂದರ್ಭ ಪಾಲಿಸಬೇಕಾದ ಶಿಷ್ಟಾಚಾರದ ಕುರಿತ ಅಗತ್ಯದ ಮಾರ್ಗದರ್ಶಿ ಸೂತ್ರವನ್ನು ಕೇಂದ್ರ ಸರಕಾರ ಪ್ರಕಟಿಸಲಿದೆ. ಎಚ್‌ಐವಿ/ಏಡ್ಸ್ ಬಾಧಿತ ತನ್ನ ಕುಟುಂಬದ ವ್ಯವಹಾರವನ್ನು ನಿರ್ವಹಿಸಲು ಸಾಕಷ್ಟು ಪ್ರೌಢತೆ ಹೊಂದಿರುವ 12ರಿಂದ 18 ವರ್ಷದ ಒಳಗಿನ ವ್ಯಕ್ತಿ, 18ರ ಕೆಳಹರೆಯದ ತನ್ನ ಸಹೋದರನ ಪೋಷಕನಾಗಿ ಕಾರ್ಯನಿರ್ವಹಿಸಬಹುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವಾಗ, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವಾಗ, ಆಸ್ತಿಯ ನಿರ್ವಹಣೆ, ಚಿಕಿತ್ಸೆ ಪಡೆಯುವ ಸಂದರ್ಭ ಈ ಅಂಶ ಅನ್ವಯವಾಗುತ್ತದೆ. ಸೆಕ್ಷನ್ 4ರ ಅಂಶಗಳನ್ನು ಉಲ್ಲಂಘಿಸುವವರ ವಿರುದ್ಧ ಇದೀಗ ಜಾರಿಯಲ್ಲಿರುವ ಇತರ ನಿಯಮಗಳಡಿ ಕ್ರಮಗಳನ್ನು ಕೈಗೊಂಡಿದ್ದರೂ, ಹೊಸ ಕಾಯ್ದೆಯಡಿ ಕನಿಷ್ಟ 3 ತಿಂಗಳು, ಗರಿಷ್ಟ 2 ವರ್ಷ ಜೈಲುಶಿಕ್ಷೆ ಮತ್ತು ಗರಿಷ್ಟ 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News