ಬೆಂಗಳೂರು: ಜೀತದಾಳುಗಳಾಗಿ ದುಡಿಯುತ್ತಿದ್ದ 14 ಕಾರ್ಮಿಕರ ರಕ್ಷಣೆ

Update: 2018-09-11 15:19 GMT

ಬೆಂಗಳೂರು, ಸೆ.11: ಕಳೆದ ಐದು ತಿಂಗಳಿನಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲ್‌ಕುಪ್ಪೆಯಲ್ಲಿರುವ ಟಿಬೇಟಿಯನ್ ಕಾಲನಿಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 14 ಮಂದಿಯನ್ನು ಪೊಲೀಸ್ ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಎಲ್ಲ ಜೀತ ಕಾರ್ಮಿಕರು 28ರಿಂದ 60ವರ್ಷ ವಯಸ್ಸಿನವರಾಗಿದ್ದು, ಹೆಚ್ಚಿನವರು 30ರ ಆಸುಪಾಸು ಪ್ರಾಯದವರಿದ್ದಾರೆ. 

ಇವರಲ್ಲಿ ಏಳು ಮಂದಿ ಐದು ತಿಂಗಳಿನಿಂದ, ಉಳಿದವರು ಮೂರು ತಿಂಗಳಿನಿಂದ ಇಲ್ಲಿನ ಫಾರ್ಮ್‌ನಲ್ಲಿ ದುಡಿಯುತ್ತಿದ್ದರು. ಈ ಎಲ್ಲಾ ಕಾರ್ಮಿಕರನ್ನು ಗದಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಡ್ಯ, ಲಿಂಗಸಗೂರು, ಹುಬ್ಬಳ್ಳಿ ಮತ್ತು ನೆಲಮಂಗಲದಿಂದ ಕರೆತರಲಾಗಿತ್ತು. ಫಾರ್ಮ್‌ನ ಮಾಲಕನ ಸಹೋದರ ಇವರಿಗೆ ಸುಳ್ಳು ಆಮಿಷ ಒಡ್ಡಿ ಇಲ್ಲಿಗೆ ಕರೆತಂದಿದ್ದರು ಎನ್ನಲಾಗಿದೆ.

"ದಿನದಲ್ಲಿ ಎಂಟು ಗಂಟೆ ಕೆಲಸ, 350ರೂ.ಗಳ ದಿನಗೂಲಿ ಜೊತೆಗೆ ಉಳಿದುಕೊಳ್ಳಲು ಮನೆ, ಮೂರು ಹೊತ್ತು ಒಳ್ಳೆಯ ಊಟ, ಪ್ರತಿ ರಾತ್ರಿ ಮದ್ಯ ನೀಡಲಾಗುವುದು ಎಂದು ಆಶ್ವಾಸನೆ ನೀಡಿ ಕರೆತರಲಾಗಿತ್ತು. ಅಲ್ಲದೆ, 15 ದಿನ ಕೆಲಸ ಮಾಡಿದ ಮೇಲೆ ಸಂಬಳ ನೀಡಲಾಗುತ್ತದೆ. ಅನಂತರ ನಿಮಗೆ ಕೆಲಸ ಇಷ್ಟವಾದರೆ ಮುಂದುವರಿಸಬಹುದು, ಇಲ್ಲವಾದರೆ ಮನೆಗೆ ವಾಪಸ್ಸು ಕಳುಹಿಸಲಾಗುತ್ತದೆ ಎಂದು ಮಾಲಕರು ನಂಬಿಸಿದ್ದರು. ಇದನ್ನು ನಂಬಿ ನಾವು ಕೆಲಸಕ್ಕೆ ಬಂದಿದ್ದೆವು.

ಆದರೆ, ಅವರು ಹೇಳಿದ ಮಾತಿನಂತೆ ನಡೆದುಕೊಂಡಿಲ್ಲ. ಅಲ್ಲಿ ನಮಗೆ ಚಿತ್ರಹಿಂಸೆ ನೀಡುತ್ತಿದ್ದರು. ಅಲ್ಲದೆ, ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಕೂಲಿ ಹಣವನ್ನು ನೀಡುತ್ತಿರಲಿಲ್ಲ. ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 7 ಗಂಟೆಯವರೆಗೆ ದುಡಿಯಬೇಕಿತ್ತು. ಶುಂಠಿಯ ಫಾರ್ಮ್‌ನಲ್ಲಿ ಗಿಡ ನೆಡುವುದು, ಕಳೆ ಕೀಳುವುದು, ಕೀಟನಾಶಕ ಸಿಂಪಡಣೆ, ಗೊಬ್ಬರ ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಅಡುಗೆ ಮಾಡಲು ಯಾರನ್ನಾದರೂ ಒಬ್ಬರಿಗೆ ತೀರಾ ಅತ್ಯಲ್ಪ ಅವಧಿ ನೀಡಲಾಗುತ್ತಿತ್ತು. ಆ ಸಮಯದಲ್ಲಿ ಅವರು ಅಡುಗೆ ಮಾಡಿ ಪುನಃ ಕೆಲಸ ಮಾಡಬೇಕಿತ್ತು" ಎಂದು ಬಿಡುಗಡೆಗೊಂಡ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.

ತಮ್ಮ ಸಂಬಳ-ರಜೆ ಕೇಳಿದರೆ ಮಾಲಕ ಎಲ್ಲರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ. ಜೊತೆಗೆ ಹೀನಾಯವಾಗಿ ಬೈಯುತ್ತಿದ್ದ. ಮೋಟಾರ್ ಸೈಕಲ್ ಚೈನಿನಿಂದ ಹಾಗೂ ಕೋಲಿನಿಂದ ಥಳಿಸುತ್ತಿದ್ದ ಎಂದು ರಕ್ಷಣೆಯಾದ ಕಾರ್ಮಿಕ ಗಾಯಗಳನ್ನು ಪ್ರದರ್ಶಿಸಿದರು. ಇಲ್ಲಿ ಕೆಲಸ ಕಡಿಮೆಯಿದ್ದ ಸಂದರ್ಭದಲ್ಲಿ ಬೇರೆ ಫಾರ್ಮ್‌ಗೆ ಕರೆದುಕೊಂಡು ಹೋಗಿ ಕೆಲಸ ಮಾಡಿಸುತ್ತಿದ್ದರು. ಅಲ್ಲಿನ ಹಣವನ್ನು ಮಾಲಕ ಪಡೆದುಕೊಂಡು, ನಮಗೆ ನೀಡುತ್ತಿರಲಿಲ್ಲ ಎಂದು ಅವರು ದೂರಿದರು.

'ನಾನು ಗದಗದವನು. ಐದು ತಿಂಗಳ ಹಿಂದೆ ನನ್ನ ಹೆಂಡತಿ ಮತ್ತು ಎರಡು ವರ್ಷದ ಮಗುವನ್ನು ಬಾಡಿಗೆ ಮನೆಯಲ್ಲಿ ಬಿಟ್ಟು ಬಂದಿದ್ದೇನೆ. ಅವರ ಬಳಿ 2ಸಾವಿರ ರೂಪಾಯಿ ಮಾತ್ರ ಇತ್ತು. ಹೆಚ್ಚಿಗೆ ದುಡಿದು ಮನೆಯವರಿಗೆ ದುಡ್ಡು ಕಳಿಸುವ ಉದ್ದೇಶದಿಂದ ಬಂದೆ. ಈ ಐದು ತಿಂಗಳಿನಿಂದ ಒಮ್ಮೆಯೂ ಅವರೊಂದಿಗೆ ಮಾತನಾಡಲು ಆಗಲಿಲ್ಲ. ಅವರಿಗೆ ಏನಾಗಿದೆಯೋ ಯಾವ ಪರಿಸ್ಥಿತಿಯಲ್ಲಿ ಇದ್ದಾರೋ ನನಗೆ ಗೊತ್ತಿಲ್ಲ. ನನ್ನ ಕೂಲಿ ಹಣ ನನಗೆ ಕೊಟ್ಟುಬಿಡಿ, ನಾನು ಪಾಪಸ್ ಹೋಗುತ್ತೇನೆ ಎಂದು ಹಲವು ಬಾರಿ ಮಾಲಕನ ಬಳಿ ಮನವಿ ಮಾಡಿದ್ದೆ. ಆದರೆ, ನಾನು ಹಣ ಕೇಳಿದ ಕೂಡಲೇ ಅವರು ಚೈನ್‌ನಿಂದ, ದೊಣ್ಣೆಗಳಿಂದ ಹೊಡೆಯುತ್ತಿದ್ದರು. ಇನ್ನೂ ಕೆಲವು ತಿಂಗಳು ಕೆಲಸ ಮಾಡಿದರೆ ಹಣ ನೀಡುವುದಾಗಿ ನನ್ನ ಮಾಲಕ ಹೇಳಿದ. ನಾನು ಈಗ ಬಿಡುಗಡೆ ಹೊಂದಿರುವುದು ತುಂಬಾ ಸಂತೋಷ ತಂದಿದೆ' ಎಂದು ಮುವತ್ತೈದು ವರ್ಷ ದಾಟದ ಯುವಕನೊಬ್ಬ ಬಿಡುಗಡೆ ನಂತರ ಸಂತೋಷವನ್ನು ಹಂಚಿಕೊಂಡರು.

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಹಾಕಲು ನಮ್ಮನ್ನು ಕಳುಹಿಸಲಿಲ್ಲ. ಒಮ್ಮೆಯೂ ಮನೆಯ ಮಂದಿಯ ಜೊತೆ ಮಾತನಾಡಲು ಬಿಟ್ಟಿರಲಿಲ್ಲ. ಮಾಲಕನ ಬಳಿ ಮಾತ್ರ ಫೋನ್ ಇತ್ತು. ಒಮ್ಮೆ ಮನೆಯ ಮಂದಿಯ ಜೊತೆ ಮಾಡನಾಡುವುದಾಗಿ ಕಾರ್ಮಿಕರು ಪರಿಪರಿಯಾಗಿ ಬೇಡಿಕೊಂಡರೂ ಆತ ಕೇಳಲಿಲ್ಲ. ಆರೋಗ್ಯ ಹದಗೆಟ್ಟಿದ್ದರೂ, ಕರುಣೆಯಿಲ್ಲದೆ ಸಂಬಂಧ ಪಡದ ಮಾತ್ರೆಗಳನ್ನು ನೀಡಿ, ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದ. ಇದೇ ಸ್ಥಳದಿಂದ ಕಳೆದ ಐದು ತಿಂಗಳಲ್ಲಿ 12 ಮಂದಿ ತಪ್ಪಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರನ್ನು ವಾಪಸ್ಸು ಕರೆತಂದು ತೀವ್ರವಾಗಿ ಹಲ್ಲೆ ನಡೆಸಿದ್ದರು ಎಂದು ಕಾರ್ಮಿಕರು ಹೇಳಿದರು.

ಜೀತದಾಳುಗಳನ್ನಾಗಿ ದುಡಿಸಿಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸೆ.8ರಂದು ಫಾರ್ಮ್ ಮಾಲಕರನ್ನು ಬಂಧಿಸಿ, ಅವರ ವಿರುದ್ಧ ಐಪಿಸಿಯ 370ನೆ (ಮಾನವ ಕಳ್ಳಸಾಗಣೆ) ಮತ್ತು ಜೀತಕಾರ್ಮಿಕ ನಿರ್ಮೂಲನಾ ಕಾಯ್ದೆಯ ಸೆಕ್ಷನ್ 16, 17, ಮತ್ತು 18 ಅಡಿ ಪ್ರಕರಣ ದಾಖಲು ಮಾಡಿ, ಎಫ್‌ಐಆರ್ ಮಾಡಲಾಗಿದೆ.

ಬಿಡುಗಡೆಗೊಂಡ ಎಲ್ಲ ಸಂತ್ರಸ್ತ ಜೀತದಾಳುಗಳಿಗೆ ಜಿಲ್ಲಾಡಳಿತವು ಸೆ.11ರಂದು ಬಿಡುಗಡೆ ಪ್ರಮಾಣಪತ್ರವನ್ನು ನೀಡಿ ಫಾರ್ಮ್ ಮಾಲಕ ಜೀತದಾಳುಗಳು ಮಾಡಿಕೊಂಡಿದ್ದ ಎಲ್ಲ ಒಪ್ಪಂದಗಳಿಂದ ಮುಕ್ತಿಗೊಳಿಸಲಾಯಿತು. ಹಾಗೂ ಸೆಂಟ್ರಲ್ ಸೆಕ್ಟರ್ ಸ್ಕೀಮ್ ಫಾರ್ ರಿಹ್ಯಾಬಿಲಿಟೇಷನ್ ಆಫ್ ಬಾಂಡೆಡ್ ಲೇಬರ್-2016ರ ಯೋಜನೆ ಅನ್ವಯ ಎಲ್ಲರಿಗೂ ತಲಾ 20 ಸಾವಿರ ರೂಪಾಯಿಗಳ ಆರಂಭಿಕ ಪರಿಹಾರಧನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News