ಚುನಾವಣಾ ನಿಧಿ ವರದಿಯಲ್ಲಿ ಅಸಮಾನತೆ: ಆಪ್‌ಗೆ ಚುನಾವಣಾ ಆಯೋಗ ಎಚ್ಚರಿಕೆ

Update: 2018-09-11 15:53 GMT

ಹೊಸದಿಲ್ಲಿ, ಸೆ.11: ಚುನಾವಣೆಯ ವೇಳೆ ಬಳಕೆ ಮಾಡಿರುವ ಹಣದ ಬಗೆಗಿನ ವರದಿಯಲ್ಲಿ ಅಸಮಾನತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ತನ್ನ ಪಾರದರ್ಶಕ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿರುವ ಕಾರಣಕ್ಕೆ ಆಮ್ ಆದ್ಮಿ ಪಕ್ಷದ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗ ಮಂಗಳವಾರ ಎಚ್ಚರಿಸಿದೆ. ಈ ವರದಿಯಲ್ಲಿ, ಹವಾಲಾ ಮೂಲಕ ನಡೆದ ವ್ಯವಹಾರಗಳನ್ನು ಸ್ವಯಂಪ್ರೇರಿತ ದೇಣಿಗೆಗಳು ಎಂದು ತಪ್ಪಾಗಿ ವಿವರಿಸಲಾಗಿದೆ ಎಂದು ಆಪ್‌ಗೆ ನೀಡಿರುವ ಶೋಕಾಸ್ ನೋಟಿಸ್‌ನಲ್ಲಿ ಆಯೋಗ ಆರೋಪಿಸಿದೆ. ಈ ನೋಟಿಸ್‌ಗೆ ಇಪ್ಪತ್ತು ದಿನಗಳ ಒಳಗಾಗಿ ಉತ್ತರಿಸುವಂತೆ ಆಯೋಗ ಆಪ್‌ಗೆ ಸೂಚಿಸಿದ್ದು ತಪ್ಪಿದರೆ ತನ್ನಲ್ಲಿರುವ ಮತ್ತು ಕೇಂದ್ರ ನೇರ ತೆರಿಗೆ ಮಂಡಳಿಯ ಬಳಿಯಿರುವ ಮಾಹಿತಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳುವುದಾಗಿ ಆಯೋಗ ಎಚ್ಚರಿಸಿದೆ.

ವಿತ್ತೀಯ ವರ್ಷ 2014-15ರ ನೈಜ ದೇಣಿಗೆ ವರದಿಯನ್ನು ಆಪ್ ಮೊದಲು ಸಲ್ಲಿಸಿತ್ತು ನಂತರ 2017ರ ಮಾರ್ಚ್ 20ರಂದು ಮತೊಮ್ಮೆ ಪರಿಷ್ಕೃತ ವರದಿಯನ್ನು ಸಲ್ಲಿಸಿತ್ತು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮೊದಲ ವರದಿಯಲ್ಲಿ, 2,696 ದಾನಿಗಳ ಮೂಲಕ 37,45,44,618 ರೂ. ದೇಣಿಗೆ ಪಡೆದಿರುವುದಾಗಿ ತಿಳಿಸಿದ್ದರೆ ಪರಿಷ್ಕೃತ ವರದಿಯಲ್ಲಿ 8,264 ದಾನಿಗಳ ಮೂಲಕ 37,60,62,631 ರೂ. ದೇಣಿಗೆಯನ್ನು ಪಡೆದುಕೊಂಡಿರುವುದಾಗಿ ತಿಳಿಸಲಾಗಿತ್ತು ಎಂದು ಆಯೋಗ ತಿಳಿಸಿದೆ. ಕೇಂದ್ರ ನೇರ ತೆರಿಗೆ ಮಂಡಳಿ ನೀಡಿದ ವರದಿಯ ಪ್ರಕಾರ, ಆಪ್‌ನ ಬ್ಯಾಂಕ್ ಖಾತೆಯಲ್ಲಿ 67.67 ಕೋಟಿ ರೂ. ಜಮೆಯಾಗಿದೆ. ಈ ಪೈಕಿ 64.44 ಕೋಟಿ ರೂ. 20,001 ರೂಗಿಂತ ಅಧಿಕ ಪ್ರಮಾಣದ ದೇಣಿಗೆಯ ಮೂಲಕ ಬಂದಿದೆ ಎಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News