ಗಣೇಶೋತ್ಸವ: ಸೌಹಾರ್ದತೆ ಕಾಪಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮನವಿ

Update: 2018-09-11 16:44 GMT

ಬೆಂಗಳೂರು, ಸೆ.11: ಗೌರಿ-ಗಣೇಶ್ ಹಬ್ಬದ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಧರ್ಮಿಯರು ಸಹಕಾರ ನೀಡುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮನವಿ ಮಾಡಿದರು.

ಮಂಗಳವಾರ ನಗರದ ಟೌನ್‌ಹಾಲ್ ಸಭಾಂಗಣದಲ್ಲಿ ಬಿಬಿಎಂಪಿ ಹೆಚ್ಚುವರಿ ಪೊಲೀಸ್ ಆಯುಕ್ತ ಹಾಗೂ ಎಲ್ಲ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ವಿವಿಧ ಧರ್ಮದ ಮುಖಂಡರೊಂದಿಗೆ ನಡೆದ ಶಾಂತಿ ಪಾಲನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಉದ್ದೇಶದಿಂದಾಗಿ ಕೆಲವು ನಿಯಮ ಜಾರಿ ಮಾಡಿದ್ದೇವೆ. ಗಣೇಶನ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮೊದಲು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿ ಪಡೆದು, ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಯಾವುದೇ ಕಾರಣಕ್ಕೂ ಗಣೇಶ ಪ್ರತಿಷ್ಠಾಪನೆಯನ್ನು ವಿವಾದಿತ ಸ್ಥಳದಲ್ಲಿ ಪ್ರತಿಷ್ಠಾಪಿಸಬಾರದು. ಜೊತೆಗೆ ಖಾಸಗಿ ಸ್ಥಳದಲ್ಲಿ ಮಾಲಕರ ಅನುಮತಿ ಕಡ್ಡಾಯವಾಗಿದೆ. ಅದೇ ರೀತಿ, ಬೆಂಕಿ ನಂದಿಸುವ ಸಾಮಗ್ರಿಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯುತ್ ಸಂಪರ್ಕ ಕುರಿತು ಬೆಸ್ಕಾಂ ಇಲಾಖೆಯಿಂದ ಅನುಮತಿ ಪಡೆಯಬೇಕು. ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಗಮನಹರಿಸಬೇಕು ಎಂದು ವಿವರಿಸಿದರು.

ಹಿರಿಯ ನಾಗರಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಬಳಸಿಕೊಳ್ಳಲು ಸ್ಥಳೀಯ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು. ಯಾವುದೇ ರೀತಿಯ ಕಾನೂನು ಉಲ್ಲಂಘಿಸಿದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾತನಾಡಿ, ಶಾಂತಿಯುತವಾಗಿ ಗಣೇಶ ಹಬ್ಬ ಆಚರಿಸಬೇಕು. ಮನೆಯಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರು ಯಾವುದೇ ರೀತಿಯ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅನುಮತಿ ಸರಳ ಮಾಡುವ ಉದ್ದೇಶ ಬಿಬಿಎಂಪಿ ಹೊಂದಿದ್ದು, ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ಅನುಮತಿ ಪಡೆಯುವ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಮುಂದಿನ ವರ್ಷದಿಂದ ಪಿಓಪಿ ಗಣೇಶ ಸಂಪೂರ್ಣ ನಿಷೇಧ ಮಾಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News