ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ

Update: 2018-09-11 16:47 GMT

ಬೆಂಗಳೂರು, ಸೆ.11: ಕುಂದಾಪುರ ಹಾಗೂ ಹೊಸದುರ್ಗ ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ನಿಗದಿ ಪ್ರಶ್ನಿಸಿದ ರಿಟ್ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಸೆ.14ಕ್ಕೆ ಮುಂದೂಡಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ಮೀಸಲು ನಿಗದಿಗೆ 2011ರ ಜನಸಂಖ್ಯೆಯನ್ನೇ ಪರಿಗಣಿಸಲಾಗುತ್ತಿದೆ. ಆದರೆ, ಜನಸಂಖ್ಯೆ ಹೆಚ್ಚಳದಿಂದಾಗಿ ವಾರ್ಡ್‌ಗಳ ಸಂಖ್ಯೆಯೂ ಏರಿದೆ. ಇದಕ್ಕೆ ಅನುಗುಣವಾಗಿ ಮೀಸಲು ಮಾರ್ಪಾಡು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಮುಂದಿನ ವಿಚಾರಣೆವರೆಗೂ ಚುನಾಯಿತ ಸದಸ್ಯರ ಯಾವುದೇ ಸಭೆ ನಡೆಸಬಾರದು ಎಂದು ಮೌಖಿಕ ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ. ನಮ್ಮನ್ನು ಅಧಿಕಾರದಿಂದ ದೂರ ಇಡುವ ದುರುದ್ದೇಶದಿಂದ ಮೀಸಲಾತಿಯನ್ನು ಬದಲಿಸಿ ಆದೇಶ ಹೊರಡಿಸಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪ.

ಸ್ಥಳೀಯ ಸಂಸ್ಥೆಗಳ ಮೀಸಲು ನಿಗದಿ ಪ್ರಶ್ನಿಸಿದ ಅರ್ಜಿಗಳನ್ನು ಧಾರವಾಡ ಹೈಕೋರ್ಟ್ ಪೀಠ ಸೋಮವಾರವಷ್ಟೆ ಮಾನ್ಯ ಮಾಡಿ ತಡೆ ನೀಡಿದ ಬೆನ್ನಲ್ಲೆ ಈಗ ಮತ್ತಷ್ಟು ಅರ್ಜಿಗಳು ಹೈಕೋರ್ಟ್ ಮೆಟ್ಟಿಲೇರಿವೆ. ಕುಂದಾಪುರದ ರೋಹಿಣಿ ಉದಯಕುಮಾರ್ ಸೇರಿದಂತೆ ಆರು ಜನರು ಹಾಗೂ ಹೊಸದುರ್ಗದ ಆರ್.ಗಿರೀಶ್ ಮತ್ತು ಆರ್.ಎಸ್.ಪ್ರಶಾಂತ್ ಈ ಅರ್ಜಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News