ಯುಎನ್‌ಎಚ್‌ಎಸ್ ಕಡ್ಡಾಯಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಿದ ಬ್ರೆಟ್ ಲೀ

Update: 2018-09-11 16:52 GMT

ಬೆಂಗಳೂರು, ಸೆ.11: ನವಜಾತ ಶಿಶುಗಳ ಶ್ರವಣ ಸಾಮರ್ಥ್ಯ ಸ್ಕ್ರೀನಿಂಗ್ ಕಡ್ಡಾಯಗೊಳಿಸಲು ಕ್ರಿಕೆಟ್ ದಂತಕಥೆ ಬ್ರೆಟ್ ಲೀ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್ನಲ್ಲಿ ಕೊಶ್ಲರ್ ಲಿಮಿಟೆಡ್ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರವಣ ದೋಷ ಭಾರತದಲ್ಲಿ ಎರಡನೇ ಅತಿದೊಡ್ಡ ಅಂಗವೈಕಲ್ಯವಾಗಿದ್ದು, ಇಷ್ಟಾಗಿಯೂ ಜನರಿಗೆ ಅರಿವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶ್ರವಣ ಸಾಮರ್ಥ್ಯದ ಬಗ್ಗೆ ನವಜಾತ ಶಿಶುಗಳನ್ನು ಸ್ಕ್ರೀನಿಂಗ್‌ಗೆ ಒಳಪಡಿಸುವ ವ್ಯವಸ್ಥೆಯಿಲ್ಲ. ಆದರೆ, ವಿದೇಶಗಳಲ್ಲಿ ಸಾರ್ವತ್ರಿಕವಾಗಿ ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್(ಯುಎನ್‌ಎಚ್‌ಎಸ್) ಕಡ್ಡಾಯವಾಗಿದೆ ಎಂದು ತಿಳಿಸಿದರು. 2050ರ ವೇಳೆಗೆ 900 ದಶಲಕ್ಷ ಮಂದಿ ಶ್ರವಣದೋಷದಿಂದ ಬಳಲಿದ್ದಾರೆ ಎಂದು ಶ್ರವಣ ತಜ್ಞರು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಶ್ರವಣ ಸಾಧನ ಉತ್ಪಾದನಾ ಮತ್ತು ಅಳವಡಿಕೆ ಕಂಪೆನಿಯಾದ ಕೊಶ್ಲೆರ್‌ಗೆ ಜಾಗತಿಕ ಶ್ರವಣ ರಾಯಭಾರಿಯಾಗಿರುವ ಬ್ರೆಟ್ ಲೀ, ಮುಖ್ಯವಾಗಿ ಮಕ್ಕಳಲ್ಲಿ ಶ್ರವಣ ನಷ್ಟ, ಭಾವನಾತ್ಮಕ ಹಾಗೂ ಸಾಮಾಜಿಕ ಪರಿಣಾಮದ ಅರಿವು ಮೂಡಿಸುವ ಅಭಿಯಾನದಲ್ಲಿ ಸತತ 4 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಕೊಶ್ಲರ್ ಲಿಮಿಟೆಡ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News