ದೇಶ ಬಯಸುವ ನೈಜ ನಾಯಕನಿನ್ನೂ ಬಂದಿಲ್ಲ: ಸದ್ಗುರು ಜಗ್ಗಿ ವಾಸುದೇವ್

Update: 2018-09-11 16:54 GMT

ಬೆಂಗಳೂರು, ಸೆ.11: ಕೆಲವೊಂದು ಕ್ಷೇತ್ರಗಳಲ್ಲಿ ನಾವು ಮಹತ್ವದ ಪ್ರಗತಿ ಸಾಧಿಸಿದ್ದರೂ, ದೇಶದ ಜನಸಂಖ್ಯೆಯ ಅರ್ಧದಷ್ಟು ಜನರಿನ್ನೂ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ದೇಶದ ಸಮಸ್ತ ಜನರನ್ನು ಸುಸ್ಥಿತಿಗೆ ಕೊಂಡೊಯ್ಯದ ಹೊರತು ಯಾವುದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಆ ಗುರಿ ತಲುಪುವುದೂ ಸಾಧ್ಯವಿಲ್ಲ ಎಂದು ತಿಳಿಸಿದರು.

ದೇಶವು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದರೂ ಈಗಲೂ ಕೆಲವು ಮೂಲ ಸೌಕರ್ಯಗಳ ಕೊರತೆಯಿದೆ. ನಮಗೆ ಬೇಕಾದ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳುವ, ನಮಗೆ ಬೇಕಾದ ರೀತಿಯಲ್ಲಿ ದೇಶವನ್ನು ಕಟ್ಟುವ ಮತ್ತು ಮುಂದಿನ ಪೀಳಿಗೆಗೆ ಅಗತ್ಯವಿರುವ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಇದಾಗಬೇಕಿದ್ದರೆ, ಪೋಷಣೆ, ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಮುಂತಾದ ಮೂಲಭೂತ ಅಗತ್ಯಗಳ ಮೇಲೆ ಗಮನ ಹರಿಸುವುದು ಅನಿವಾರ್ಯ. ಈ ದೇಶದ ದೊಡ್ಡ ಕೊರತೆಯೆಂದರೆ, ಸಾಕಷ್ಟು ಪ್ರಮಾಣದಲ್ಲಿ ಮಹಾನ್ ನಾಯಕರು ನಮ್ಮ ದೇಶದಲ್ಲಿನ್ನೂ ಬೆಳೆದುಬಂದಿಲ್ಲ. ನಾವೇನೋ ರಾಜಕಾರಣಿಗಳು, ಆಡಳಿತಗಾರರನ್ನು ಸೃಷ್ಟಿಸಿದ್ದೇವೆಯೇ ಹೊರತು, ನೈಜ ನಾಯಕರನ್ನಲ್ಲ. ಈ ದೇಶದ ಜನತೆ, ಎಲ್ಲಕ್ಕೂ ಮಿಗಿಲಾಗಿ ಅಗತ್ಯವಿರುವ ಹೊಣೆಗಾರಿಕೆ, ಜಾಣ್ಮೆ ಹಾಗೂ ಉದ್ದೇಶ ಹೊಂದಿರುವ ಯುವ ಜನಾಂಗವು, ತಾವೇ ಮುಂದಾಳತ್ವ ವಹಿಸಿಕೊಂಡು ನಾವೆಲ್ಲರೂ ಬಯಸುವ ಮಾದರಿಯ ಉತ್ತಮ ರಾಷ್ಟ್ರನಿರ್ಮಾಣಕ್ಕಾಗಿ ಶ್ರಮಿಸಬೇಕಾಗಿದೆ. ಹಿಮಾಲಯದಿಂದ ಹಿಂದೂ ಮಹಾ ಸಾಗರದ ವರೆಗೂ ಇದ್ದಂತಹ ಭೌಗೋಳಿಕ ಸ್ಥಾನವನ್ನು ಹಾಗೂ ನಾಗರಿಕತೆಯನ್ನು ಹಿಂದು ಎಂದು ಕರೆಯುತ್ತಿದ್ದರು. ಆಫ್ರಿಕ, ಯುರೋಪ್ ದೇಶಗಳಂತೆ ನಮ್ಮ ದೇಶಗಳಲ್ಲಿಯೂ ನಾಗರಿಕತೆ ಬೆಳೆಯಿತು. ಆದರೆ, ಭೌಗೋಳಿಕ ಸ್ಥಾನದ ಹೆಗ್ಗುರುತಾಗಿ ಹಿಂದು ಎಂದು ದೇಶಕ್ಕೆ ಹೆಸರು ಬಂದಿದೆ ಎಂದು ತಿಳಿಸಿದರು.

ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಭ್ರಮಾಲೋಕದಲ್ಲಿ ಪಯಣಿಸಿದಾಗ, ಒಮ್ಮೆ ಆ ಪಯಣದಲ್ಲಿ ಒಳ್ಳೆಯದಾದರೆ, ಮತ್ತೊಮ್ಮೆ ಕೆಟ್ಟದಾಗಬಹುದು. ಆದರೆ, ಯುವ ಜನತೆ ಭ್ರಾಂತಿಯ ಮೇಲೆ ನಿಯಂತ್ರಣ ಕಳೆದುಕೊಂಡಾಗ ಮಾತ್ರ, ಗೊತ್ತುಗುರಿಯಿಲ್ಲದೆ ಸಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News