ಮಹಾದಾಯಿ ನೀರು ಹಂಚಿಕೆ: ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಲು ಮಾಜಿ ಶಾಸಕ ಕೋನರೆಡ್ಡಿ ಆಗ್ರಹ

Update: 2018-09-11 16:57 GMT

ಬೆಂಗಳೂರು, ಸೆ.11: ಮಹಾದಾಯಿ ನ್ಯಾಯಾಧೀಕರಣ ಕಳೆದ ಆ.14 ರಂದು ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಬೇಕು ಎಂಬ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಈ ಬಗ್ಗೆ ಮುಂದಿನ ನಡೆ ಕುರಿತು ಚರ್ಚಿಸಲು ರಾಜ್ಯ ಸರಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಜೆಡಿಎಸ್ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಆಗ್ರಹಿಸಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ಗೆ ಮನವಿ ಪತ್ರ ಸಲ್ಲಿಸಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗೆ ಸ್ಪಂದಿಸಲು ಶೀಘ್ರದಲ್ಲಿಯೇ ಸರ್ವಪಕ್ಷ ಸಭೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.

ಮಹಾದಾಯಿ ಯೋಜನೆಯ ವ್ಯಾಪ್ತಿಯ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ-ಧಾರವಾಡ, ನವಲಗುಂದ, ಅಣ್ಣಿಗೇರಿ, ಗದಗ, ರೋಣ, ನರಗುಂದ, ಗಜೇಂದ್ರಗಡ, ಬಾಗಲಕೋಟೆ, ಹುನಗುಂದ, ಬಾದಾಮಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಖಾನಾಪೂರ, ಸೇರಿ ಹಲವು ತಾಲೂಕುಗಳ ಲಕ್ಷಾಂತರ ಜನರ ಕುಡಿಯುವ ನೀರು ಹಾಗೂ ಇತರೆ ಉಪಯೋಗಕ್ಕಾಗಿ ಕೂಡಲೇ ಅಗತ್ಯ ಕಾಮಗಾರಿ, ಯೋಜನೆ ಕೈಗೊಳ್ಳಬೇಕು ಎಂದು ಕೋರಿದರು.

ಪ್ರಸ್ತುತ ಹಂಚಿಕೆಯಾದ ನೀರನ್ನು ಉಪಯೋಗಿಸಲು ಕೇಂದ್ರ ಸರಕಾರದ ಆದೇಶ ಪಡೆಯಬೇಕಾಗಿದೆ. ಕೇಂದ್ರ ಸರಕಾರದ ನಿರ್ದೇಶನದಂತೆ ನ್ಯಾಯಾಧೀಕರಣ ರಚನೆಯಾಗಿದ್ದು, ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ನಮಗೆ ಇನ್ನೂ ಹೆಚ್ಚು ನೀರು ಸಿಗಬೇಕಿದ್ದು, ನ್ಯಾಯಾಧೀಕರಣ ಮುಂದೆ ಅರ್ಜಿ ಸಲ್ಲಿಸಬೇಕಾ ಅಥವಾ ಸುಪ್ರೀಂಕೋರ್ಟ್‌ಗೆ ಅರ್ಜಿಸಲ್ಲಿಸಬೇಕಾ ಮತ್ತು ಕೇಂದ್ರದಿಂದ ಅಧಿಸೂಚನೆ, ಇದಕ್ಕೆ ಸಂಬಂಧಿಸಿದ ಆದೇಶ ಪಡೆಯಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರದಿಂದ ಮಹಾದಾಯಿ ನೀರು ಉಪಯೋಗಿಸಲು ಮತ್ತು ಯೋಜನೆ ಪ್ರಾರಂಭಿಸಲು ಎಲ್ಲ ರೀತಿಯ ಪರವಾನಿಗೆ ಪಡೆಯಬೇಕು. ರಾಜ್ಯ ಸರಕಾರ ಕೂಡಲೇ ನ್ಯಾಯಾಧೀಕರಣ ಆದೇಶದ ಪ್ರಕಾರ ಯೋಜನೆ ತಯಾರಿಸಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ನೀರಾವರಿ ನಿಗಮಕ್ಕೆ ಅನುದಾನ ನೀಡಿ, ಟೆಂಡರ್ ಕರೆದು ಕಾಮಗಾರಿ ಆರಂಭ ಮಾಡಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಮಹಾದಾಯಿ ಯೋಜನೆ ಜಾರಿಗೆ ಅಗತ್ಯವಿದ್ದಲ್ಲಿ ಒಂದು ಅಭಿವೃದ್ಧಿ ಸಮಿತಿ ರಚನೆ ಮಾಡಬೇಕು. ಕಳಸಾ ಬಂಡೂರಿ ಯೋಜನೆಗಾಗಿ ಹಾಗೂ ಬೇರೆ ಕಡೆ ಯೋಜನೆ ಜಾರಿ ಮಾಡಲು ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಬೇಕು ಹಾಗೂ ಪರವಾನಿಗೆ ಪಡೆಯಲು ಬೆಳಗಾವಿ ಜಿಲ್ಲಾಧಿಕಾರಿಗಳ ಹಂತದಲ್ಲಿ ಖಾಸಗಿ ಜಮೀನು ಮಾಲಕರ ಹತ್ತಿರ ದರ ನಿಗದಿ ಪಡಿಸಿ ಜಮೀನು ಖರೀದಿಸಲು ನಿರ್ಧರಿಸಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಧೀಕರಣದ ಆದೇಶದಂತೆ 2018-19 ರಲ್ಲಿ ಒಂದು ತಿಂಗಳಲ್ಲಿ ಡಿಪಿಎಆರ್ ತಯಾರಿಸಿ ಮಹಾದಾಯಿ, ಕಳಸಾ-ಬಂಡೂರಿ ಹಾಗೂ ಕೊಟ್ಟಿ ಡ್ಯಾಂ ಜಲ ವಿದ್ಯುತ್ ಕಾಮಗಾರಿ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಅತೀ ವೇಗದಲ್ಲಿ ಈಗ ಹಂಚಿಕೆಯಾದ 13.42 ಟಿಎಂಸಿ ನೀರು ಉಪಯೋಗಿಸಿ ನಂತರ ಹೆಚ್ಚಿನ ನೀರು ಪಡೆಯಲು ಕಾನೂನು ಹೋರಾಟ ಮಾಡಲು ಮುಂದಾಗಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News