ಬೆಂಗಳೂರು: ಮೌಲಾನ ಅಬುಲ್ ಕಲಾಂ ಆಝಾದ್ ಭವನಕ್ಕೆ ಶಂಕುಸ್ಥಾಪನೆ

Update: 2018-09-11 17:04 GMT

ಬೆಂಗಳೂರು, ಸೆ.11: ಅಲ್ಪಸಂಖ್ಯಾತರ ನಿರ್ದೇಶನಾಲಯದ ಕೇಂದ್ರ ಕಚೇರಿ ಮೌಲಾನ ಅಬುಲ್ ಕಲಾಂ ಆಝಾದ್ ಭವನದ ನೂತನ ಕಟ್ಟಡಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವ ಬಿ.ಝಡ್. ಝಮೀರ್ ಅಹಮದ್ ಖಾನ್ ಶಂಕುಸ್ಥಾಪನೆ ಮಾಡಿದರು. ವಸಂತನಗರದ ಟ್ಯಾಂಕ್ ಬೆಡ್ ರಸ್ತೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಗೂ ದೇವರಾಜ ಅರಸು ಭವನ ಮಾದರಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 10 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಕೇಂದ್ರ ಕಚೇರಿಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

ಈ ವೇಳೆ ಮಾತನಾಡಿದ ಝಮೀರ್ ಅಹಮದ್ ಖಾನ್, ನಿರ್ದೇಶನಾಲಯದ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಗೃಹ ಮಂಡಳಿಯು ಟೆಂಡರ್ ಪಡೆದಿದ್ದು 18 ತಿಂಗಳೊಳಗಾಗಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗುತ್ತದೆ. ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬೆಂಗಳೂರು ನಗರ ಕಚೇರಿ, ಡಿಜಿಟಲ್ ಲೈಬ್ರರಿ ಹಾಗೂ ಸರ್.ಸೆಯ್ಯದ್ ಅಹಮದ್ ಖಾನ್ ಸಂಶೋಧನಾ ಕೇಂದ್ರ ಒಳಗೊಂಡಿರಲಿದೆ ಎಂದು ಹೇಳಿದರು.

ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಮೌಲಾನ ಅಬುಲ್ ಕಲಾಂ ಆಝಾದ್ ಭವನದ ಪೂರ್ಣಗೊಂಡಿವೆ. ಇನ್ನುಳಿದ 10 ಜಿಲ್ಲೆಗಳಲ್ಲಿ ಕಚೇರಿಯ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಸ್ಥಳವನ್ನು ಮಂಜೂರು ಮಾಡಿದ್ದರು. ಈ ಕಟ್ಟಡವು ಅಲ್ಪಸಂಖ್ಯಾತರ ಕಲ್ಯಾಣ ಒಂದು ಕೇಂದ್ರದ ರೀತಿಯಲ್ಲಿ ಕೆಲಸ ಮಾಡಲಿದೆ. ಇದೇ ರೀತಿಯ ಕಟ್ಟಡ ಶೇಷಾದ್ರಿಪುರಂನಲ್ಲಿ ನಿರ್ಮಾಣವಾಗಲಿದೆ. ಶೀಘ್ರದಲ್ಲಿಯೇ ಅದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹಮದ್, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಅಬ್ದುಲ್ ಜಬ್ಬಾರ್, ಅಲ್ಪಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕ ಅಕ್ರಂ ಪಾಷ, ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನವ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News