ರಫೇಲ್ ಒಪ್ಪಂದ: ಮೋದಿ ದೇಶದ ಭದ್ರತೆಯ ಜೊತೆ ರಾಜಿ ಮಾಡಿಕೊಂಡಿದ್ದಾರೆ: ಗಣ್ಯರ ಆರೋಪ

Update: 2018-09-11 17:34 GMT

ಹೊಸದಿಲ್ಲಿ, ಸೆ.11: ರಫೇಲ್ ಯುದ್ಧ ವಿಮಾನ ಒಪ್ಪಂದದ ಮೂಲಕ ಪ್ರಧಾನಿ ಮೋದಿ ದೇಶದ ಭದ್ರತೆಯ ಜೊತೆ ರಾಜಿ ಮಾಡಿಕೊಂಡಿದ್ದಾರೆ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ಬಿಜೆಪಿಯ ಮಾಜಿ ಮುಖಂಡರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಮಂಗಳವಾರ ಆರೋಪಿಸಿದ್ದಾರೆ. ಮಂಗಳವಾರ ಹೊಸದಿಲ್ಲಿಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮೂವರು ಗಣ್ಯರು, ರಿಲಯನ್ಸ್-ಡಸಾಲ್ಟ್ ಜೆವಿಗೆ ಈ ಒಪ್ಪಂದದ ವ್ಯವಹಾರವನ್ನು ನಡೆಸುವ ಅವಕಾಶ ನೀಡಿರುವುದು ಮೋದಿಗೆ ಅಂಬಾನಿ ನೀಡುತ್ತಿರುವ ಸೇವೆಗ ಪ್ರತಿಯಾಗಿ ಸರಕಾರ ಅವರಿಗೆ ನೀಡಿರುವ ಕಾಣಿಕೆ ಎಂಬುದು ರಿಲಯನ್ಸ್, ಅರುಣ್ ಜೇಟ್ಲಿ ಮತ್ತು ನೀಡಿರುವ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತ ಸರಕಾರವು 2016ರಲ್ಲಿ 58,000 ಕೋಟಿ ರೂ. ವೆಚ್ಚದಲ್ಲಿ 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್ ಜೊತೆ ಅಂತರ್‌ಸರಕಾರಿ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ ನೀಡಲಾಗುತ್ತಿರುವ ಮೊತ್ತವು ನೈಜ ಮೊತ್ತಕ್ಕಿಂತ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಕ್ಷೇತ್ರದಲ್ಲಿ ಅನುಭವವೇ ಇಲ್ಲದ ಅನಿಲ್ ಅಂಬಾನಿ ಮಾಲಕ್ವದ ಕಂಪೆನಿಗೆ ಈ ಮೆಗಾ ಯೋಜನೆಯನ್ನು ನೀಡುವ ಮೂಲಕ ಸರಕಾರ ಪಕ್ಷಪಾತ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಫ್ರಾನ್ಸ್ ಜೊತೆ ಮಾಡಲಾದ ಒಪ್ಪಂದದಲ್ಲಿ ರಹಸ್ಯವನ್ನು ಕಾಯಬೇಕು ಎಂಬ ನಿಬಂಧನೆಯಿದೆ ಎಂದು ಹೇಳಿರುವ ಸರಕಾರ, ಈ ಒಪ್ಪಂದಲ್ಲಿ ಖರೀದಿಸಲಾಗಿರುವ ಪ್ರತಿ ವಿಮಾನದ ಬೆಲೆಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದೆ.

ಈ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ತಿಳಿಸಿರುವ ಸರಕಾರ ಸಾಕ್ಷಿ ನೀಡುವಂತೆ ಕಾಂಗ್ರೆಸ್‌ಗೆ ಸವಾಲೆಸೆದಿತ್ತು. ಭಾರತ ಮತ್ತು ಫ್ರಾನ್ಸ್ ನಡುವೆ ಮಾಡಲಾದ ಒಪ್ಪಂದದ ಪ್ರಕಾರ, ರಫೇಲ್ ವಿಮಾನಕ್ಕಾಗಿ ಭಾರತ ಪಾವತಿಸುವ 59,000 ಕೋಟಿ ರೂ.ನಲ್ಲಿ ಶೇ.50ನ್ನು ಡಸಾಲ್ಟ್ ಕಂಪೆನಿಯು ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಬೇಕು. ಈ ಒಪ್ಪಂದದ ಮೂಲಕ ಮೋದಿ ದೇಶದ ಭದ್ರತಾ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಂಡಿದ್ದಾರೆ ಮತ್ತು ವಿಮಾನಗಳ ಸಂಖ್ಯೆಯನ್ನು 126ರಿಂದ 36ಕ್ಕೆ ಇಳಿಸುವ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ಕೆಲಸ ಮಾಡದಿದ್ದರೂ ರಿಲಯನ್ಸ್ ಹೆಸರನ್ನು ಸೇರಿಸಲಾಗಿದೆ. ಅಂದರೆ, ಅವರು ಕೇವಲ ಕಮಿಶನ್ ಪಡೆಯುವ ಮಧ್ಯವರ್ತಿಗಳಾಗಿದ್ದಾರೆ. ಸರಕಾರದ ಅನುಮತಿಯಿಲ್ಲದೆ ರಿಲಯನ್ಸನ್ನು ಸೇರಿಸಿಕೊಳ್ಳಲಾಗಿದೆ ಎಂಬ ಹೇಳಿಕೆ ಸುಳ್ಳು. ಈ ಒಪ್ಪಂದವನ್ನು ತುರ್ತು ಸ್ಥಿತಿಯಲ್ಲಿ ಮಾಡಲಾಯಿತು ಎಂಬ ಹೇಳಿಕೆ ನೀಡುವ ಮೂಲಕ ಸರಕಾರ ಸೇನೆಯ ಭುಜದ ಮೇಲೆ ಗನ್ ಇಟ್ಟು ಗುಂಡು ಹಾರಿಸಲು ಯತ್ನಿಸಿದೆ. ಜೊತೆಗೆ ಭದ್ರತಾ ಖರೀದಿ ಪ್ರಕ್ರಿಯೆಯ ವ್ಯಂಗ್ಯವಾಡಿದೆ ಎಂದು ಭೂಷಣ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News