ನಾಪತ್ತೆಯಾಗಿದ್ದ ಬಾಲಕನ ಪತ್ತೆಗೆ ಫೇಸ್‌ಬುಕ್ ನೆರವಾಗಿದ್ದು ಹೇಗೆ ಗೊತ್ತೇ ?

Update: 2018-09-12 04:41 GMT

ಮುಂಬೈ, ಸೆ. 22: ಹೈದರಾಬಾದ್‌ನ ತನ್ನ ಮನೆಯಿಂದ 2011ರಲ್ಲಿ ನಾಪತ್ತೆಯಾಗಿದ್ದ 15ರ ಬಾಲಕ ಮುಂಬೈನಲ್ಲಿ ಏಳು ವರ್ಷ ಬಳಿಕ ಪತ್ತೆಯಾಗಿದ್ದಾನೆ. ಈ ಯುವಕ ತನ್ನ ಕುಟುಂಬದ ಜತೆ ಮತ್ತೆ ಬೆಸೆದುಕೊಳ್ಳಲು ಕಾರಣವಾದದ್ದು ಫೇಸ್‌ಬುಕ್ !

ಸುಜೀತ್ ಕುಮಾರ್ ಝಾ (23) ಎಂಬ ಯುವಕನನ್ನು ಮುಂಬೈ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ.ಭಾಗ್ವತ್ ಹೇಳಿದ್ದಾರೆ.

ಮುಂಬೈನಲ್ಲಿ ಕೇಟರಿಂಗ್ ಗುತ್ತಿಗೆದಾರರೊಬ್ಬರ ಅಧೀನದಲ್ಲಿ ಕೆಲಸ ಮಾಡುತ್ತಿರುವ ಸುಜೀತ್ ಸಿಕ್ಕಿದಾಗ ಕುಟುಂಬದ ಸಂಭ್ರಮ ಮುಗಿಲು ಮುಟ್ಟಿತು.
ಹೈದರಾಬಾದ್‌ನ ಮೌಲಾ ಅಲಿ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ 15 ವರ್ಷದ ಮಗ ನಾಪತ್ತೆಯಾಗಿದ್ದಾನೆ ಎಂದು ಆತನ ಸಹೋದರಿ ಮತ್ತು ಭಾವ ದೂರು ನೀಡಿದ್ದರು. ಮೂಲತಃ ಕುಮಾರ್ ಬಿಹಾರದ ಮಧುಬನ ಜಿಲ್ಲೆಯ ನಿವಾಸಿ. ಬಾಲಕ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು 2011ರ ಅಕ್ಟೋಬರ್‌ನಲ್ಲಿ ಅಂತಿಮ ವರದಿ ಸಲ್ಲಿಸಿದರು.

"ಫೇಸ್‌ಬುಕ್‌ನಲ್ಲಿ ಈತನನ್ನು ಪತ್ತೆ ಮಾಡಿದ ಸುಜೀತ್‌ನ ಭಾವ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರು. ಆದರೆ ಆತ ಇದನ್ನು ಸ್ವೀಕರಿಸಲಿಲ್ಲ. ಬಳಿಕ ಬೇರೆ ಹೆಸರಿನಿಂದ ತನ್ನ ಪ್ರೊಫೈಲ್ ಬದಲಿಸಿದ. ಈ ಬಗ್ಗೆ ಮಲ್ಕಜ್‌ಗಿರಿ ಪೊಲೀಸರಿಗೆ ದೂರು ನೀಡಿ, ಸಾಮಾಜಿಕ ಜಾಲತಾಣದಲ್ಲಿ ಇರುವ ಈತನನ್ನು ಪತ್ತೆ ಮಾಡಿಕೊಡುವಂತೆ ಕೋರಿದ್ದರು" ಎಂದು ಆಯುಕ್ತರು ವಿವರಿಸಿದ್ದಾರೆ. ಮಾಹಿತಿ ಆಧಾರದಲ್ಲಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಆತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News