ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್, ಟಿಡಿಪಿ, ಎಡಪಕ್ಷಗಳ ಮಹಾಮೈತ್ರಿಕೂಟ

Update: 2018-09-12 05:50 GMT

 ಹೈದರಾಬಾದ್, ಸೆ.12: ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಪಕ್ಷವನ್ನು ಮಣಿಸುವ ಏಕೈಕ ಉದ್ದೇಶದಿಂದ ಮಹಾಕೂಟಮಿ(ಮಹಾಮೈತ್ರಿ)ರಚಿಸಿಕೊಳ್ಳಲು ತೆಲಂಗಾಣದ ಮೂರು ವಿರೋಧಪಕ್ಷಗಳಾದ-ಕಾಂಗ್ರೆಸ್, ತೆಲುಗು ದೇಶಂ ಪಕ್ಷ(ಟಿಡಿಪಿ) ಹಾಗೂ ಕಮ್ಯುನಿಸ್ಟ್ ಪಕ್ಷ(ಸಿಪಿಐ)ನಿರ್ಧರಿಸಿವೆ. ಆದರೆ, ಮಹಾಮೈತ್ರಿ ಬಗ್ಗೆ ಸ್ಪಷ್ಟವಾದ ರೂಪುರೇಷೆಗಳು ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಾಗಿದೆ.

ಇದೇ ಮೊದಲ ಬಾರಿಗೆ ಟಿಡಿಪಿ ಪಕ್ಷ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಮುಂದಾಗಿದೆ. ಸಿಪಿಐ ಈ ಹಿಂದೆ ಎರಡೂ ಪಕ್ಷಗಳೊಂದಿಗೆ ಮೈತ್ರಿಕೊಂಡಿತ್ತು.

ತೆಲಂಗಾಣದ ಮೂರು ವಿರೋಧ ಪಕ್ಷಗಳ ನಾಯಕರು ಮಂಗಳವಾರ ನಗರದ ಬಂಜಾರ ಹಿಲ್ಸ್ ಪ್ರದೇಶದಲ್ಲಿರುವ ಹೊಟೇಲ್‌ನಲ್ಲಿ ಸಭೆ ಸೇರಿ ನಾಲ್ಕು ಗಂಟೆಗೂ ಅಧಿಕ ಸಮಯ ಚರ್ಚೆ ನಡೆಸಿದರು. ಸಭೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಪಿಸಿಸಿ) ಅಧ್ಯಕ್ಷ ಕ್ಯಾಪ್ಟನ್ ಎನ್. ಉತ್ತಮ್‌ಕುಮಾರ್ ರೆಡ್ಡಿ, ತೆಲಂಗಾಣ ಟಿಡಿಪಿ ಅಧ್ಯಕ್ಷ ಎಲ್.ರಮಣ ಹಾಗೂ ಸಿಪಿಐ ರಾಜ್ಯ ಕಾರ್ಯದರ್ಶಿ ಚಡಾ ವೆಂಕಟ ರೆಡ್ಡಿ ಹಾಗೂ ಇತರ ಪಕ್ಷಗಳ ನಾಯಕರು ಭಾಗವಹಿಸಿದ್ದರು.

‘‘ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಮಹಾಮೈತ್ರಿ ಅಥವಾ ಮಹಾ ಕೂಟಮಿ ರಚಿಸಲು ನಾವು ನಿರ್ಧರಿದ್ದೇವೆ. ಸಮಾನಮನಸ್ಕ ಪಕ್ಷಗಳಾದ ತೆಲಂಗಾಣ ಜನ ಸಮಿತಿ ಹಾಗೂ ಸಿಪಿಐ(ಎಂ)ನೊಂದಿಗೆ ಮೈತ್ರಿಮಾಡಿಕೊಳ್ಳಲು ಯತ್ನಿಸಲಿದ್ದೇವೆ’’ ಎಂದು ಪಿಸಿಸಿ ಅಧ್ಯಕ್ಷ ಸಭೆಯ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News