ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲು ತಯಾರಿದ್ದಾರೆ: ದಿನೇಶ್‌ ಗುಂಡೂರಾವ್

Update: 2018-09-12 12:14 GMT

ಬೆಂಗಳೂರು, ಸೆ.12: ರಾಜ್ಯ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಷಡ್ಯಂತ್ರಗಳನ್ನು ಮುಂದುವರೆಸಿದರೆ, ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್‌ಗೆ ಬರಲು ತುದಿಗಾಲಲ್ಲಿ ನಿಂತಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಎಚ್ಚರಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡಲು ಬಿಜೆಪಿ ಮುಂದಾಗಿರುವುದು ಸರಿಯಲ್ಲ. ಬಿಜೆಪಿ ನಾಯಕರು ಸುಳ್ಳು ಅಪಪ್ರಚಾರ ನಿಲ್ಲಿಸದಿದ್ದರೆ, ಮುಂದಿನ ದಿನಗಳಲ್ಲಿ ಅದಕ್ಕೆ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಬಿಜೆಪಿಗೆ ಅಧಿಕಾರದ ಆಸೆ ಅತಿಯಾಗಿದೆ. ಹೀಗಾಗಿಯೆ ಸಮ್ಮಿಶ್ರ ಸರಕಾರ ನಡುವೆ ಬಿರುಕು ಮೂಡಿಸಲು ಮಿತಿಮೀರಿ ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಅನೈತಿಕವಾಗಿ ಸರಕಾರ ರಚಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಇವರ ಸ್ವಾರ್ಥ ರಾಜಕಾರಣ ರಾಜ್ಯದ ಜನತೆಗೆ ಹಾಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಚೆನ್ನಾಗಿ ಅರಿವಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಸಂವಿಧಾನ ಬದ್ಧವಾಗಿ ರಚನೆಗೊಂಡಿದೆ. ಎರಡು ಪಕ್ಷಗಳ ಸಚಿವರು-ಶಾಸಕರು ಒಮ್ಮತದಿಂದ ಸರಕಾರ ನಡೆಸುತ್ತಿದ್ದಾರೆ. ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ. ಆದರೂ ಬಿಜೆಪಿ ನಾಯಕರು ವಿನಾಕಾರಣ ಸಮ್ಮಿಶ್ರ ಸರಕಾರದ ವಿರುದ್ಧ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುವ ಸಲುವಾಗಿ ಕಾಂಗ್ರೆಸ್ ಶಾಸಕರಿಗೆ ಕಿರುಕುಳ ಕೊಡುತ್ತಿದ್ದಾರೆ. ಶಾಸಕ ಅನಿಲ್‌ ಚಿಕ್ಕಮಾದುಗೆ ಕಿರುಕುಳ ಕೊಡಲಾಗಿದೆ. ಕಾಂಗ್ರೆಸ್ ನಾಯಕರೆಲ್ಲರೂ ಒಟ್ಟಿಗೆ ಇದ್ದೇವೆ. ನಮ್ಮ ತಂಟೆಗೆ ಬಂದರೆ, ಬಿಜೆಪಿಗೆ ಪ್ರತ್ಯುತ್ತರ ನೀಡಲು ನಾವು ತಯಾರಿದ್ದೇವೆ. ಈಗಾಗಲೆ ಬಿಜೆಪಿ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿರುವುದನ್ನು ಮರೆಯಬಾರದು ಎಂದು ದಿನೇಶ್‌ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ನಾವು ಎಂದೆಂದಿಗೂ ಕಾಂಗ್ರೆಸ್ ಕಾರ್ಯಕರ್ತರು. ಶಾಸಕ ಅಮರೇಗೌಡ ಬಯ್ಯೆಪುರ, ಟಿ.ತುಕಾರಾಂ, ರಹೀಂಖಾನ್, ನಾರಾಯಣ್ ರಾವ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಶಾಸಕರು ಒಟ್ಟಿಗೆ ಇದ್ದೇವೆ. ಆದರೂ ಬಿಜೆಪಿ ನಾಯಕರು ನಮ್ಮ ಹೆಸರನ್ನು ಯಾಕೆ ಬಳಸಿಕೊಳ್ಳುತ್ತಿದ್ದಾರೆಂಬುದು ಗೊತ್ತಿಲ್ಲ.

-ನಾಗೇಂದ್ರ, ಶಾಸಕ-ಬಳ್ಳಾರಿ ಗ್ರಾಮೀಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News