ಖರ್ಗೆ ಅಣತಿಯಂತೆ ನಡೆದುಕೊಳ್ಳುತ್ತೇವೆ: ಸಚಿವ ರಮೇಶ್ ಜಾರಕಿಹೊಳಿ

Update: 2018-09-12 12:37 GMT

ಬೆಂಗಳೂರು, ಸೆ. 12: ಹಿರಿಯ ಮುಖಂಡ ಹಾಗೂ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಮ್ಮ ತಂದೆ ಸಮಾನರು. ನಮ್ಮ ರಾಜಕೀಯ ಗುರುಗಳು. ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಇಲ್ಲಿನ ಸದಾಶಿವನಗರದಲ್ಲಿ ಖರ್ಗೆಯವನ್ನು ಭೇಟಿ ಮಾಡುವ ಮೊದಲ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖರ್ಗೆಯವರ ಅಣತಿಯಂತೆ ನಡೆದುಕೊಳ್ಳುತ್ತೇವೆ. ನಾನು ವಾಲ್ಮೀಕಿ ಜನಾಂಗದ ನಾಯಕ. ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲಾ ಒಟ್ಟಾಗಿ ನಿಲ್ಲುತ್ತೇವೆ ಎಂದರು.

ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂದು ಹಿರಿಯ ನಾಯಕರಲ್ಲಿ ಮನವಿ ಮಾಡಿದ್ದೇವೆ. ಯಾರು ಸಚಿವರಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ತಿಳಿಸಿದ್ದೇವೆ ಎಂದರು.

ಮನವೊಲಿಕೆ ಯತ್ನ: ಬೆಳಗಾವಿ ರಾಜಕೀಯ ವಿಚಾರಗಳಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪದ ಆರೋಪದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಜಾರಕಿಹೊಳಿ ಸಹೋದರರನ್ನು ಮನವೊಲಿಸಲು ಕಾಂಗ್ರೆಸ್ ಮುಖಂಡರು ರಮೇಶ್ ಜಾರಕಿಹೊಳಿ ಮನೆಗೆ ದೌಡಾಯಿಸುತ್ತಿದ್ದಾರೆ.

ಇಲ್ಲಿನ ಚಾಲುಕ್ಯ ವೃತ್ತದ ಬಳಿಕ ಸಪ್ತ ಸಚಿವರ ನಿವಾಸದಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಬುಧವಾರ ಬೆಳಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಹಾಗೂ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News