'ನಗರ ನಕ್ಸಲ್' ಘೋಷಣೆ ವಿವಾದ: ಗಿರೀಶ್ ಕಾರ್ನಾಡ್ ವಿರುದ್ಧ ತನಿಖೆಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2018-09-12 12:59 GMT

ಬೆಂಗಳೂರು, ಸೆ.12: ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚಿತವಾಗುತ್ತಿರುವ ‘ನಗರ ನಕ್ಸಲ್’ ಘೋಷಣೆ ವಿವಾದ ಹೈಕೋರ್ಟ್ ಅಂಗಳ ಪ್ರವೇಶಿಸಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ತನಿಖೆಗೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ.

ಇತ್ತೀಚೆಗೆ ನಗರದಲ್ಲಿ ನಡೆದ ಗೌರಿ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ‘ಮಿ ಟೂ ಅರ್ಬನ್ ನಕ್ಸಲ್’ ಎಂಬ ಭಿತ್ತಿಪತ್ರವನ್ನು ಕೊರಳಿಗೆ ನೇತುಹಾಕಿಕೊಂಡಿದ್ದ ಕಾರ್ನಾಡ್ ಅವರ ನಡವಳಿ, ನಕ್ಸಲ್ ಸಿದ್ಧಾಂತವನ್ನು ಪ್ರಚುರಪಡಿಸುವುದಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ನಿಷೇಧಿತ ಮಾವೋ ನಕ್ಸಲ್ ಸಂಘಟನೆಯ ಮುಖಂಡರೊಂದಿಗೆ ಕಾರ್ನಾಡ್‌ಗೆ ನಿಕಟ ಸಂಪರ್ಕವಿದೆ. ಹೀಗಾಗಿ, ಕಾರ್ನಾಡ್ ಅವರು ನಕ್ಸಲ್ ಜೊತೆಗೆ ಹೊಂದಿರುವ ಸಂಪರ್ಕದ ಬಗ್ಗೆ ತನಿಖೆ ನಡೆಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆದೇಶಿಸಬೇಕು ಎಂದು ಕೋರಿ ವಕೀಲ ಎನ್.ಪಿ.ಅಮೃತೇಶ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಕ್ಸಲ್ ನಿಗ್ರಹ ದಳದ ಡಿಐಜಿ ಮತ್ತು ಗಿರೀಶ್ ಕಾರ್ನಾಡ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗಿದೆ.

ನಕ್ಸಲ್ ಹಣದಲ್ಲಿ ಕಾರ್ಯಕ್ರಮ: ಕಾರ್ನಾಡ್ ಅವರು ನಿಷೇಧಿತ ಮಾವೋ ನಕ್ಸಲ್ ಸಂಘಟನೆಯ ಮುಂಚೂಣಿ ಸಂಘಟನೆಕಾರ ಕಬೀರ್ ಕಾಳ ಮಂಚ್ ಅವರೊಂದಿಗೆ ನಿಕಟ ಸಂಪರ್ಕ ಹಾಗೂ ಸಂಬಂಧ ಹೊಂದಿದ್ದಾರೆ. ಹೀಗಾಗಿ, ಕಾರ್ನಾಡ್ ಅವರ ವಿರುದ್ಧ ತನಿಖೆ ನಡೆಸಬೇಕಿದೆ. ಗೌರಿ ಲಂಕೇಶ್ ಸ್ಮರಣಾ ಕಾರ್ಯಕ್ರಮವು ನಕ್ಸಲ್ ಹಣದಿಂದ ಆಯೋಜನೆಗೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಯಾರು ಹಣ ನೀಡಿದರು ಎಂಬ ಬಗ್ಗೆ ಸತ್ಯಾಂಶ ಶೋಧಿಸಬೇಕಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ತನಿಖೆಗೆ ಮನವಿ: ಕಾರ್ನಾಡ್ ಅವರ ವಾಸದ ಮನೆ ಹಾಗೂ ಕಚೇರಿಯ ಮೇಲೆ ಶೋಧ ನಡೆಸಲು ಮತ್ತು ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆದೇಶಿಸಬೇಕು. ಕಾರ್ನಾಡ್ ಮತ್ತು ನಿಷೇಧಿತ ಸಂಘಟನೆಗಳ ನಡುವಿನ ಒಡನಾಟ ಬಗ್ಗೆ ತನಿಖೆ ನಡೆಸಲು ಆದೇಶಿಸಬೇಕು. ಹಾಗೆಯೇ, ಗೌರಿ ಲಂಕೇಶ್ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರರು ನಕ್ಸಲರೊಂದಿಗೆ ಹೊಂದಿರುವ ಸಂಪರ್ಕ ಬಗ್ಗೆಯೂ ಇದೇ ವೇಳೆ ತನಿಖೆ ನಡೆಸಿ, ವರದಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News