ಎಂಎಸ್‌ಪಿ: ನೂತನ ಖರೀದಿ ನೀತಿಗೆ ಸಂಪುಟದ ಅಸ್ತು

Update: 2018-09-12 13:03 GMT

ಹೊಸದಿಲ್ಲಿ,ಸೆ.12: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕುರಿತಂತೆ ನೂತನ ಖರೀದಿ ನೀತಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಈ ನೀತಿಯಡಿ ಒಂದು ಯೋಜನೆಯು ಎಣ್ಣೆಬೀಜಗಳ ಬೆಲೆಗಳು ಎಂಎಸ್‌ಪಿಗಿಂತ ಕೆಳಗಿಳಿದರೆ ಬೆಳೆಗಾರರಿಗೆ ಪರಿಹಾರ ನೀಡುವುದನ್ನು ಮುಖ್ಯವಾಗಿಟ್ಟುಕೊಂಡರೆ,ಇನ್ನೊಂದು ಯೋಜನೆಯು ಖರೀದಿಗಾಗಿ ಖಾಸಗಿಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ರಾಜ್ಯ ಸರಕಾರಗಳಿಗೆ ಅವಕಾಶ ಕಲ್ಪಿಸುತ್ತದೆ.

ರೈತರಿಗೆ ಎಂಎಸ್‌ಪಿ ದೊರೆಯುವಂತಾಗಲು ದೋಷರಹಿತ ವ್ಯವಸ್ಥೆಯೊಂದನ್ನು ರೂಪಿಸುವುದಾಗಿ ಸರಕಾರವು ಈ ವರ್ಷದ ಮುಂಗಡಪತ್ರದಲ್ಲಿ ಪ್ರಕಟಿಸಿತ್ತು. ಕೇಂದ್ರ ಕೃಷಿ ಸಚಿವಾಲಯ ಮತ್ತು ರಾಜ್ಯಗಳೊಂದಿಗೆ ಸಮಾಲೋಚಿಸಿ ವ್ಯವಸ್ಥೆಯೊಂದನ್ನು ಸೂಚಿಸುವಂತೆ ಅದು ನೀತಿ ಆಯೋಗವನ್ನು ಕೇಳಿಕೊಂಡಿತ್ತು.

‘ಅನ್ನದಾತಾ ಮೌಲ್ಯ ಸಂರಕ್ಷಣಾ ಯೋಜನೆ ’ ಎಂದು ಹೆಸರಿಸಲಾಗಿರುವ ನೂತನ ನೀತಿಯಡಿ ಬೆಲೆಗಳು ಎಂಎಸ್‌ಪಿಗಿಂತ ಕೆಳಗೆ ಕುಸಿದರೆ ರೈತರನ್ನು ರಕ್ಷಿಸಲು ಹಲವಾರು ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ರಾಜ್ಯ ಸರಕಾರಗಳಿಗೆ ಅವಕಾಶ ನೀಡಲಾಗುವುದು.

‘ಬೆಲೆ ಕೊರತೆ ಪಾವತಿ(ಪಿಡಿಪಿ)’ಎಂಬ ನೂತನ ಯೋಜನೆಯನ್ನು ರೂಪಿಸಲಾಗಿದ್ದು,ಸಗಟು ಮಾರುಕಟ್ಟೆಯಲ್ಲಿ ಎಣ್ಣೆಬೀಜಗಳ ಮಾಸಿಕ ಸರಾಸರಿ ಬೆಲೆಗಳು ಮತ್ತು ಎಂಎಸ್‌ಪಿ ನಡುವಿನ ವ್ಯತ್ಯಾಸವನ್ನು ರೈತರಿಗೆ ಸರಕಾರವು ಪಾವತಿಸಲಿದೆ. ಪ್ರತಿ ರಾಜ್ಯದಲ್ಲಿಯ ಶೇ.25ರವರೆಗೆ ಎಣ್ಣೆಬೀಜಗಳ ಉತ್ಪಾದನೆಗೆ ಇದನ್ನು ಅನುಷ್ಠಾನಿಸಲಾಗುವುದು ಎಂದು ಮೂಲಗಳು ತಿಳಿಸಿದವು. ಜೊತೆಗೆ ಪ್ರಾಯೋಗಿಕ ನೆಲೆಯಲ್ಲಿ ಎಣ್ಣೆಬೀಜಗಳ ಖರೀದಿಗಾಗಿ ಖಾಸಗಿಯವರನ್ನು ಸೆಳೆಯಲು ರಾಜ್ಯಗಳಿಗೆ ಅವಕಾಶ ನೀಡಲಾಗಿದೆ.

ಖಾದ್ಯತೈಲಗಳ ಮೇಲಿನ ಆಮದು ಅವಲಂಬನೆಯನ್ನು ತಗ್ಗಿಸಲು ಸರಕಾರವು ಬಯಸಿರುವುದರಿಂದ ಇವೆರಡೂ ಯೋಜನೆಗಳನ್ನು ಎಣ್ಣೆಬೀಜಗಳಿಗಾಗಿ ಮೀಸಲಿರಿಸಲಾಗಿದೆ.

ನೂತನ ನೀತಿಯಡಿ ರಾಜ್ಯ ಸರಕಾರಗಳು ಹಾಲಿ ಇರುವ ಬೆಲೆ ಬೆಂಬಲ ಯೋಜನೆ(ಪಿಎಸ್‌ಎಸ್)ಯನ್ನು ಆಯ್ದುಕೊಳ್ಳಬಹುದಾಗಿದೆ.

ರೈತರಿಗೆ ಎಂಎಸ್‌ಪಿ ದೊರೆಯುವಂತಾಗಲು ರಾಜ್ಯಗಳು ಪಿಡಿಪಿ ಅಥವಾ ಪಿಡಿಪಿ ಅಥವಾ ಖಾಸಗಿಯವರನ್ನು ತೊಡಗಿಸಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಮೂಲಗಳು ಹೇಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News