ಬೆಂಗಳೂರು: ದರವೇಶಿ, ಹಕ್ಕಿಪಿಕ್ಕಿ ಸಮುದಾಯದವರ ತೆರವು ಖಂಡಿಸಿ ವಿಸಿಕೆ ಪ್ರತಿಭಟನೆ

Update: 2018-09-12 14:08 GMT

ಬೆಂಗಳೂರು, ಸೆ. 12: ರೈಲ್ವೆ ಹಳಿ, ಮೋರಿ, ಉದ್ಯಾನವನ ಪಕ್ಕದಲ್ಲಿ, ಹೈಟೆಕ್ಷನ್ ವೈಯರ್ ಕೆಳಗೆ ಹಾಗೂ ಸರಕಾರಿ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿದ್ದ ದರವೇಶಿ, ಬುಡುಬುಡುಕೆ, ಮಂಗಳಮುಖಿ, ಕೊಲೆಬಸವ, ಹಕ್ಕಿಪಿಕ್ಕಿ ಸಮುದಾಯದವರನ್ನು ಏಕಾಏಕಿ ತೆರವುಗೊಳಿಸಲು ಮುಂದಾಗಿರುವ ಬಿಬಿಎಂಪಿಯ ಕ್ರಮ ಖಂಡಿಸಿ ‘ಬಿಡುಗಡೆಯ ಚಿರತೆಗಳು’ ಸಂಘಟನೆ ನೇತೃತ್ವದಲ್ಲಿ ನೂರಾರು ಮಂದಿ ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಮತದಾರರ ಗುರುತಿನ ಚೀಟಿ, ಆಧಾರ್, ಪಡಿತರ ಚೀಟಿ ಹೊಂದಿದ್ದು, ಹಲವು ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವ ಮೇಲ್ಕಂಡ ಸಮುದಾಯದ ಜನರು ಟೆಂಟ್ ನಿರ್ಮಿಸಿಕೊಂಡು ವಾಸಮಾಡುತ್ತಿದ್ದು, ಅವರನ್ನು ಎತ್ತಂಗಡಿ ಮಾಡಬಾರದು. ಒಂದು ವೇಳೆ ಎತ್ತಂಗಡಿ ಮಾಡುವುದಾದರೆ ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ವಿಸಿಕೆ ರಾಜ್ಯಾಧ್ಯಕ್ಷ ವಿ.ಮೂರ್ತಿ, ನೂರಾರು ಮಂದಿ ಹತ್ತಾರು ವರ್ಷಗಳಿಂದ ರೈಲ್ವೆ ಹಳಿ, ಚರಂಡಿ, ಪಾರ್ಕ್‌ಗಳ ಪಕ್ಕದಲ್ಲಿ ಜೀವನ ನಡೆಸುತ್ತಿದ್ದು, ಅವರೆಲ್ಲರನ್ನು ಪಾಲಿಕೆ ಅಧಿಕಾರಿಗಳು ಏಕಾಏಕಿ ಬೀದಿಪಾಲು ಮಾಡಲು ಮುಂದಾಗಿರುವುದು ಅಕ್ಷಮ್ಯ ಎಂದು ಖಂಡಿಸಿದರು.

ರಾಜ್ಯ ಸರಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದರೆ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಈ ವರ್ಗದ ಜನರಿಗೆ ಕೂಡಲೇ ನೀರು, ವಸತಿ ಸೇರಿದಂತೆ ಸೂಕ್ತ ಮೂಲಸೌಲಭ್ಯ ಕಲ್ಪಿಸಬೇಕು. ಆ ಮೂಲಕ ಅವರೂ ನಾಗರಿಕರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಅಂದಿನ ಊಟವನ್ನು ಅಂದೇ ಸಂಪಾದಿಸಿ ಜೀವನ ನಡೆಸುವ ದರವೇಶಿ, ಬುಡುಬುಡುಕೆ, ಮಂಗಳಮುಖಿ, ಕೊಲೆಬಸವ, ಹಕ್ಕಿಪಿಕ್ಕಿ ಸಮುದಾಯದವರ ಎತ್ತಂಗಡಿ ಸಲ್ಲ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ವಿಸಿಕೆ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು. ಎಂ.ಎಸ್.ಶೇಖರ್, ರಜನಿ ಖನಿ ಶೇಖರ್, ಆಂಜಿ, ಡೇವಿಡ್ ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News