ವಿವಿ-ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷಾ ಬೋಧನೆ ಕಡ್ಡಾಯಕ್ಕೆ ಸೂಚನೆ

Update: 2018-09-12 14:11 GMT

ಬೆಂಗಳೂರು, ಸೆ. 12: ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಹಾಗೂ ಅವುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕಲಿಸಲು ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಿ.ಚಿ.ಬೋರಲಿಂಗಯ್ಯನವರು ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಸರಕಾರಿ, ಖಾಸಗಿ ಹಾಗೂ ಅನುದಾನಿತ ವಿವಿ ಮತ್ತು ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಬೋಧಿಸುವಂತೆ ಶಿಫಾರಸು ಮಾಡಿದ್ದು ಅದನ್ನು ಕೂಡಲೇ ಆದೇಶದ ಮೂಲಕ ಕಾಲೇಜು ಶಿಕ್ಷಣ ಇಲಾಖೆ ಜಾರಿಗೊಳಿಸುವಂತೆ ತಾಕೀತು ಮಾಡಿದರು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಡ್ಡಾಯವಾಗಿ ಕನ್ನಡ ತಂತ್ರಾಂಶವನ್ನೆ ಬಳಸುವಂತೆ ಸೂಚನೆ ನೀಡಿದ ಅವರು, ಏಳು ದಿನಗಳ ಒಳಗಾಗಿ ಇಲಾಖೆಯ ಅಂತರ್ಜಾಲ ತಾಣವನ್ನು ಕನ್ನಡೀಕರಣಗೊಳಿಸುವಂತೆ ಇಲಾಖೆಯ ಆಯುಕ್ತರಿಗೆ ಗಡುವು ನೀಡಿದರು.

ಕನ್ನಡ ಐಚ್ಛಿಕ ವಿಷಯವನ್ನು ಕನಿಷ್ಠ 10 ಜನ ವಿದ್ಯಾರ್ಥಿಗಳಿದ್ದರೂ ಬೋಧಿಸಬೇಕಿದ್ದು ಕೆಲವು ಖಾಸಗಿ ಸಂಸ್ಥೆಯವರು ಈ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಿದ ಅವರು, ಸದರಿ ನಿಯಮವನ್ನು ಕನಿಷ್ಠ 5 ಜನ ವಿದ್ಯಾರ್ಥಿಗಳೆಂದು ತಿದ್ದುಪಡಿ ಮಾಡುವಂತೆ ಸೂಚನೆ ನೀಡಿದರು.

ಅಂತೆಯೇ ಕನ್ನಡ ಭಾಷಾ ಬೋಧನೆಯ ಅವಧಿಯನ್ನು ಕಡಿತಗೊಳಿಸುವುದು ಮತ್ತು ಕನ್ನಡ ಭಾಷಾ ಪ್ರಾಧ್ಯಾಪಕರಿಗೆ ಕಡಿಮೆ ವೇತನ ನೀಡುತ್ತಿರುವುದರ ಬಗ್ಗೆಯೂ ಪ್ರಾಧಿಕಾರಕ್ಕೆ ದೂರು ಬಂದಿದ್ದು, ಇಲಾಖೆ ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಂಡು ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಇಲಾಖೆಯ ಆಯುಕ್ತರಿಗೆ ಸೂಚಿಸಿದರು.

ಅನಂತರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಭೇಟಿ ನೀಡಿದ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ರಾಜ್ಯದ ಎಲ್ಲ ಶಾಲೆಗಳು ಸಿಬಿಎಸ್ಸಿ ಐಸಿಎಸ್ಸಿ ಪಠ್ಯಕ್ರಮಗಳನ್ನೂ ಒಳಗೊಂಡಂತಹ ಶಾಲೆಗಳಲ್ಲಿ ಬೋಧಿಸುವಂತೆ ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಜಾರಿಗೆ ತಂದಿದ್ದು, ಕಾಯ್ದೆಯನ್ನು ಪ್ರಸಕ್ತ ಸಾಲಿನಿಂದ ಜಾರಿಗೊಳಿಸಲು ಕೆಲ ಶಾಲೆಗಳು ವಿಫಲವಾಗಿರುವ ಬಗ್ಗೆ ವರದಿ ಬಂದಿದೆ. ಇಲಾಖೆಯ ಆಯುಕ್ತರು ಕಾಯ್ದೆಯನ್ನು ಕಡ್ಡಾಯ ಜಾರಿಗೊಳಿಸಲು ಸ್ಪಷ್ಟ ನಿರ್ದೇಶನ ನೀಡಬೇಕು ಎಂದರು.

ಕೆಲವು ಖಾಸಗಿ ಸಂಸ್ಥೆಗಳು ಸರಕಾರಿ ಶಾಲಾ ಆವರಣದಲ್ಲಿ ತಮ್ಮ ಸ್ವಂತ ಕಟ್ಟಡಗಳನ್ನು ಕಟ್ಟಿಕೊಂಡು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ ಅವರು, ಇದಕ್ಕೆ ಸಂಬಂಧಿಸಿದಂತೆ ದಟ್ಟಲಕಾಡು ಪ್ರಕರಣವನ್ನು ಉದಾಹರಿಸಿ ಇಂತಹ ಪ್ರಕರಣಗಳಿಗೆ ಇಲಾಖೆಯು ಆಸ್ಪದ ಕೊಡದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಅಂತೆಯೇ ಗುಣಮಟ್ಟದ ಇಂಗ್ಲಿಷ್ ಭಾಷೆಯನ್ನು ಪ್ರಥಮ ತರಗತಿಯಿಂದಲೇ ಬೋಧಿಸಲು ಸರಕಾರ ಇಂಗ್ಲಿಷ್ ಭಾಷಾ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿರುವ ಕ್ರಮವನ್ನು ಶ್ಲಾಘಿಸಿದ ಅವರು, ಸರಕಾರಕ್ಕೆ ಪ್ರಾಧಿಕಾರದ ವತಿಯಿಂದ ಸಲ್ಲಿಸಿರುವ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಯ ಶಿಫಾರಸನ್ನು ಜಾರಿಗೊಳಿಸುವ ಕುರಿತು ಇಲಾಖೆಯೂ ಕ್ರಮವಹಿಸಬೇಕೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News