ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಶೀಘ್ರ ಪತ್ತೆ ಹಚ್ಚಿ: ಪರಮೇಶ್ವರ್ ಸೂಚನೆ

Update: 2018-09-12 14:13 GMT

ಬೆಂಗಳೂರು, ಸೆ.12: ನಗರದಲ್ಲಿ ವೀಸಾ ಅವಧಿ ಮುಗಿದರೂ ವಾಸಿಸುತ್ತಿರುವ ವಿದೇಶಿಗರನ್ನು ಪತ್ತೆ ಹಚ್ಚಿ, ಅವರನ್ನು ಸ್ವದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಗರ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬುಧವಾರ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಮೇಲ್ಮಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರದಲ್ಲೇ ಇರುವ 107 ವಿದೇಶಿಗರ ವಿರುದ್ಧ ಪ್ರಕರಣ ದಾಖಲಿಸಿದ್ದು, ಶೀಘ್ರವೆ ಅವರನ್ನು ಅವರ ದೇಶಕ್ಕೆ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಕ್ರಿಕೆಟ್ ನೋಡಲು ಬಂದಿದ್ದ ವಿದೇಶಿಗರು ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಕೆಲವರು ಮಾಧಕ ವಸ್ತುಗಳ ಜಾಲದಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ. ಹೀಗಾಗಿ, ಅವಧಿ ಮುಗಿದ ವಿದೇಶಿಗರನ್ನು ಪತ್ತೆ ಹಚ್ಚಿ ಸ್ವದೇಶಕ್ಕೆ ಕಳುಹಿಸಲು ನಿರ್ಲಕ್ಷ್ಯ ವಹಿಸಬಾರದು. ಒಂದು ವೇಲೆ ನಿರ್ಲಕ್ಷ್ ವಹಿಸಿದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಾಲಿನಲ್ಲಿ 151 ಗಾಂಜಾ ಕೇಸ್‌ಗಳು ದಾಖಲಾಗಿದ್ದು, 591 ಕೆಜಿ ಗಾಂಜಾ, ಕೊಕೇನ್ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ 298 ಜನರನ್ನು ಬಂಧಿಸಿದ್ದೇವೆ. ಈ ಪೈಕಿ 28 ವಿದೇಶಿಗರು ಇದ್ದಾರೆ. ಇನ್ನು, ಟ್ರಾಫಿಕ್‌ನಲ್ಲಿ 54,86,854 ಪ್ರಕರಣ ದಾಖಲಾಗಿದ್ದು, 55 ಕೋಟಿ ರೂ.ದಂಡ ಸಂಗ್ರಹಿಸಿದ್ದೇವೆ. ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ನೂತನವಾಗಿ ಅಡಾಪ್ಟಿವ್ ಸಿಗ್ನಲ್ ಕ್ಯಾಮರಾ ಅಳವಡಿಕೆ, ಟ್ರಾಫಿಕ್ ಪೊಲೀಸರಿಗೆ ಬಾಡಿ ಕ್ಯಾಮರಾ ನೀಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News