ಸೆ.15ರಂದು ಮನೆಯಂಗಳದಲ್ಲಿ ಮಾತುಕತೆ: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್ ಮುಖ್ಯ ಅತಿಥಿ

Update: 2018-09-12 14:21 GMT

ಬೆಂಗಳೂರು, ಸೆ.12: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೆ.15ರಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿರುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್ ಮುಖ್ಯಅತಿಥಿಯಾಗಿ ಆಗಮಿಸಲಿದ್ದಾರೆ.

ಸಫಾಯಿ ಕರ್ಮಚಾರಿ ಸಮುದಾಯದ ನೇತೃತ್ವ ವಹಿಸಿರುವ ಬೇಜವಾಡ ವಿಲ್ಸನ್, ಪೌರಕಾರ್ಮಿಕರ ಸಮುದಾಯದ ಸರ್ವತೋಮುಖ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಪೌರಕಾರ್ಮಿಕರ ಬದುಕಿನ ಕುರಿತು ಜನತೆಗೆ, ಸರಕಾರಕ್ಕೆ ಅರಿವು ಮೂಡಿಸುವಂತಹ ಕೆಲಸದಲ್ಲಿ ತೊಡಗಿದ್ದಾರೆ. ದೇಶಾದ್ಯಂತ ಮಲ ಹೊರುವ ಪದ್ಧತಿ ನಿಷೇಧಿಸಿ ದಶಕಗಳೆ ಕಳೆದಿದ್ದರೂ ಇಂದಿಗೂ ಮುಂದುವರೆಯುತ್ತಿದೆ. ಹಾಗೂ ಇದರ ಪರಿಣಾಮವಾಗಿ ನೂರಾರು ಪೌರಕಾರ್ಮಿಕರು ಮಲದ ಗುಂಡಿಗೆ ಬಿದ್ದು ಸಾವನ್ನಪ್ಪುತ್ತಿರುವುದನ್ನು ಕಣ್ಣಾರೆ ಕಂಡಿರುವ ಅವರು, ಮಲಹೊರುವ ಪದ್ಧತಿಯ ನಿಷೇಧಕ್ಕೆ ಸರಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದಾರೆ.

ಪೌರಕಾರ್ಮಿಕ ಸಮುದಾಯದ ಕುರಿತು ಕೈಗೊಂಡಿರುವ ಜನಜಾಗೃತಿ ಆಂದೋಲನದ ಫಲವಾಗಿ ಇವರಿಗೆ ಅಂತರ್‌ರಾಷ್ಟ್ರಿಯ ಮಟ್ಟದ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಹಾಗೂ ರಾಜ್ಯ ಸರಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗಾಗಿ ಇವರು ಮನೆಯಂಗಳದಲ್ಲಿ ಮಾತುಕತೆಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News