ಸೆ.13 ರಿಂದ ಫಿಮಿ ಅಂತರ್‌ರಾಷ್ಟ್ರೀಯ ಸಮ್ಮೇಳನ

Update: 2018-09-12 14:28 GMT

ಬೆಂಗಳೂರು, ಸೆ.12: ಗಣಿಗಾರಿಕೆ ವಲಯದಲ್ಲಿ ಹೂಡಿಕೆ ಮತ್ತು ತಂತ್ರಜ್ಞಾನವನ್ನು ಆಕರ್ಷಿಸಲು, ಫೆಡರೇಷನ್ ಆಫ್ ಇಂಡಿಯನ್ ಮಿನರಲ್ ಇಂಡಸ್ಟ್ರೀಸ್(ಫಿಮಿ) ಬೆಂಗಳೂರಿನ ಅಂತರ್‌ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ಸೆ.13 ರಿಂದ 15ರವರೆಗೆ ಮೂರು ದಿನಗಳ ಸಮ್ಮೇಳನ, ವಸ್ತುಪ್ರದರ್ಶನವನ್ನು ಏರ್ಪಡಿಸಿದೆ ಎಂದು ಫಿಮಿ ಉಪಾಧ್ಯಕ್ಷ ಆರ್.ಎಲ್.ಮೊಹಂತಿ ತಿಳಿಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜಂಟಿ ಮಾತನಾಡಿದ ಅವರು, ಈ ಸಮ್ಮೇಳನ ಮತ್ತು ವಸ್ತು ಪ್ರದರ್ಶನವು ಗಣಿ ಸಚಿವಾಲಯದಿಂದ ಪ್ರಾಯೋಜಿಸಲ್ಪಟ್ಟು ಹಾಗೂ ಕೆನಡಾ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನಂತಹ ಖನಿಜ ಸಮೃದ್ಧ ದೇಶಗಳ ಬೆಂಬಲದೊಂದಿಗೆ ಆಯೋಜಿಸಲಾಗಿದೆ ಎಂದರು.

ಈ ಸಮ್ಮೇಳನವು ನೀತಿ ನಿರ್ಮಾಪಕರಿಗೆ, ತಂತ್ರಜ್ಞರಿಗೆ, ಪರಿಶೋಧನಾ ಕಂಪೆನಿಗಳಿಗೆ, ಗಣಿಗಾರಿಕೆ ವೃತ್ತಿಪರರಿಗೆ ಮತ್ತು ಸಲಕರಣೆಗಳ ಪೂರೈಕೆದಾರರಿಗೆ ತಮ್ಮ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಳ್ಳಲು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ದೇಶದ ಖನಿಜ ಸಂಪನ್ಮೂಲಗಳನ್ನು ಹೊರತೆಗೆಯಲು ಮತ್ತು ಅವುಗಳ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದಂತೆ, ಗಣಿಗಾರಿಕೆ ವಲಯದಲ್ಲಿ ಇತ್ತೀಚೆಗೆ ತರಲಾದ ಕಾನೂನುಗಳ, ನಿಯಮಗಳ ಮತ್ತು ನೀತಿಗಳ ಬದಲಾವಣೆಗಳು ಪೂರಕ ಹಾಗೂ ಮಾದರಿ ಬದಲಾವಣೆಗಳಾಗಿವೆ ಎಂದು ಮೊಹಂತಿ ತಿಳಿಸಿದರು.

ಗಣಿಗಾರಿಕೆ ವಲಯವು ಅದರ ಬೆಳವಣಿಗೆಗೆ ಸಾಕಷ್ಟು ಸಾಮರ್ಥ್ಯ ಹೊಂದಿದ್ದು, ವಿಶೇಷವಾಗಿ ಪರಿಶೋಧನೆ, ಕೊರೆಯುವಿಕೆ, ಗಣಿಗಾರಿಕೆ ಕಾರ್ಯಾಚರಣೆ, ಶುಷ್ಕೀಕರಣ ಮತ್ತು ಇತರ ಸಂಬಂಧಿತ ಉಪವಲಯಗಳಂತಹ ಪ್ರದೇಶಗಳಲ್ಲಿ ಹೂಡಿಕೆಯ ವ್ಯಾಪ್ತಿಗೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದರೂ ದೇಶದ ವಿಶಾಲವಾದ ಖನಿಜ ಸಂಪತ್ತು ಪೂರ್ತಿ ಅನುಭೂತಿಗೆ ಸಿಕ್ಕಿಲ್ಲ ಎಂದು ಅವರು ಹೇಳಿದರು.

ದಕ್ಷಿಣ ಆಫ್ರಿಕಾ, ಕೆನಡಾ, ಆಸ್ಟ್ರೇಲಿಯ, ಬ್ರೆಝಿಲ್, ಇಂಡೋನೇಷಿಯಾ, ಚಿಲಿ ಮೊದಲಾದ ಇತರ ಖನಿಜ ಸಂಪನ್ಮೂಲ ದೇಶಗಳಂತೆ ನಮ್ಮ ದೇಶದಲ್ಲಿಯೂ ಖನಿಜ ನಿಕ್ಷೇಪಗಳು ಲಭ್ಯವಿದೆ. ಭಾರತವು ವಿಶೇಷವಾಗಿ ಚಿನ್ನ, ವಜ್ರ, ತಾಮ್ರ, ನಿಕ್ಕಲ್, ಸೀಸ ಮತ್ತು ಸತುಗಳ ಪರಿಶೋಧನೆಗಳು ತೀವ್ರ ಕೆಳಸ್ತರದಲ್ಲಿವೆ. ಕೆನಡಾ ಮತ್ತು ಆಸ್ಟ್ರೇಲಿಯದಂತಹ ದೇಶಗಳು ಜಾಗತಿಕ ಖನಿಜ ಪರಿಶೋಧನಾ ವೆಚ್ಚದಲ್ಲಿ ಶೇ.13-14ರಷ್ಟು ಪಾಲನ್ನು ಹೊಂದಿದ್ದರೂ, ಭಾರತದ ಪಾಲು ಅತ್ಯಲ್ಪವಾಗಿದೆ ಎಂದು ಅವರು ಹೇಳಿದರು.

ಫಿಮಿ ಮಹಾ ಪ್ರಧಾನ ಕಾರ್ಯದರ್ಶಿ ಆರ್.ಕೆ.ಶರ್ಮಾ ಮಾತನಾಡಿ, ದೇಶದಲ್ಲಿ ಪರಿಶೋಧನೆ ಚಟುವಟಿಕೆಗಳನ್ನು ಹೆಚ್ಚಿಸಲು ಸರಕಾರವು ರಾಷ್ಟ್ರೀಯ ಖನಿಜ ಪರಿಶೋಧನೆ ನೀತಿ-2016ನ್ನು ಹೊರ ತಂದಿದೆ. ಬದಲಾದ ಕಾನೂನಿನ ಚೌಕಟ್ಟಿನಡಿಯಲ್ಲಿ ನಿರೀಕ್ಷಿತ ಪರಿಶೋಧಕ ಪರವಾನಗಿಗಳನ್ನು ನಿರೀಕ್ಷಿತ ಪರಿಶೋಧಕರಿಗೆ ನೀಡಲಾಗುವುದು. ಆದರೆ, ಇವುಗಳನ್ನು ಮಾರಾಟ ಮಾಡಲು, ವರ್ಗಾಯಿಸಲು ಯಾವುದೇ ಅವಕಾಶವಿಲ್ಲ ಎಂದರು.

ಕಲ್ಲಿದ್ದಲು ವಲಯವನ್ನು ಖಾಸಗೀಕರಣಗೊಳಿಸುವಲ್ಲಿ ಕಲ್ಲಿದ್ದಲು ಸಚಿವಾಲಯವು ತೆಗೆದುಕೊಂಡ ಅಭೂತಪೂರ್ವ ಉಪಕ್ರಮವು ಸ್ವಾಗತಾರ್ಹ. ಇದು ದೇಶದಲ್ಲಿ ಕಲ್ಲಿದ್ದಲು ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾದ ಪ್ರಚೋದನೆಯನ್ನು ನೀಡುತ್ತದೆ. ಜೊತೆಗೆ ಕಾರ್ಯಾಚರಣೆ ದಕ್ಷತೆಗಳನ್ನು, ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಬಳಕೆದಾರರಿಗೆ ಕಲ್ಲಿದ್ದಲು ಸರಬರಾಜು ಮಾಡಲು ಸುಲಭವಾಗುತ್ತದೆ ಎಂದು ಅವರು ಹೇಳಿದರು.

ಫಿಮಿ ಉಪಾಧ್ಯಕ್ಷ ಶಾಂತೇಶ್ ಗುರೆಡ್ಡಿ, ಮಾಜಿ ಅಧ್ಯಕ್ಷ ನೂರ್ ಅಹ್ಮದ್, ಎಸ್.ಕೆ.ಪಟ್ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News