ಅನಾಥಾಲಯದ ಮಕ್ಕಳಿಗೆ ಲೈಂಗಿಕ ಕಿರುಕುಳ: ಮಾಲಕ, ನಿವೃತ್ತ ಯೋಧನ ಬಂಧನ

Update: 2018-09-15 07:27 GMT

ಭೋಪಾಲ್, ಸೆ. 15: ಇಲ್ಲಿನ ಖಾಸಗಿ ಅನಾಥಾಲಯದ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಲಕ, ಮಾಜಿ ಯೋಧನಾಗಿರುವ 70 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆತ ಕಳೆದ ಹಲವು ಸಮಯದಿಂದ ಅಲ್ಲಿನ ನಿವಾಸಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ಹಲವು ನಿವಾಸಿಗಳು ಆರೋಪಿಸಿದ್ದು ಅವರಲ್ಲಿ ಮೂವರು ಆತನ ದೌರ್ಜನ್ಯದಿಂದಾಗಿಯೇ ಸಾವನ್ನಪ್ಪಿದ್ದಾರೆಂದು ಆರೋಪಿಸಲಾಗಿದೆ.

ಇಬ್ಬರು ಬಾಲಕಿಯರು ಸೇರಿದಂತೆ ಐದು ಮಂದಿ ನಿವಾಸಿಗಳು ಮೊದಲು ಸಾಮಾಜಿಕ ನ್ಯಾಯ ಇಲಾಖೆಗೆ ದೂರು ನೀಡಿದ್ದು ನಂತರ ಪೊಲೀಸ್ ದೂರು ದಾಖಲಿಸಿದ್ದರು.

ಅಲ್ಲಿನ ಒಬ್ಬ ಬಾಲಕ ಲೈಂಗಿಕ ದೌರ್ಜನ್ಯದಿಂದ ಉಂಟಾದ ವಿಪರೀತ ರಕ್ತಸ್ರಾವದಿಂದ ಸಾವನ್ನಪ್ಪಿದ್ದರೆ ಇನ್ನೊಬ್ಬನ ತಲೆಯನ್ನು ಗೋಡೆಗೆ ಅಪ್ಪಳಿಸಿ ಆತನನ್ನು ಸಾಯಿಸಲಾಗಿದೆ. ಮೂರನೆ ಬಾಲಕನನ್ನು ರಾತ್ರಿಯಿಡೀ ಹೊರಗೆ  ಕಳೆಯುವಂತೆ ಮಾಡಿದ್ದರಿಂದ ಚಳಿಗೆ ಆತ ಸಾವನ್ನಪ್ಪಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

1995ರಲ್ಲಿ ನೋಂದಾವಣೆಯಾಗಿರುವ ಈ ಅನಾಥಾಲಯದಲ್ಲಿ 42 ಬಾಲಕರು ಹಾಗೂ 58 ಬಾಲಕಿಯರಿದ್ದು ಅವರು ಇಲ್ಲಿ 2003ರಿಂದ ವಾಸಿಸುತ್ತಿದ್ದಾರೆ.

ಕಳೆದ 10 ವರ್ಷಗಳಿಂದ ಈ ಅನಾಥಾಲಯವನ್ನು ವಾರ್ಡನ್ ಅನುಪಸ್ಥಿತಿಯಲ್ಲಿ ನಾಲ್ಕು ಮಂದಿ ಶಿಕ್ಷಕರೇ ನೋಡಿಕೊಳ್ಳುತ್ತಿದ್ದು. ವಾರ್ಡನ್ ಗೆ ತಕ್ಕ ಶೈಕ್ಷಣಿಕ ಅರ್ಹತೆಯಿಲ್ಲವೆಂದು ಹಲವು ವರ್ಷಗಳ ಹಿಂದೆಯೇ  ಕೆಲಸದಿಂದ ತೆಗೆದು ಹಾಕಲಾಗಿತ್ತು.

ರಾಜ್ಯದ ಪ್ರತಿ ಆಶ್ರಯತಾಣ ಮತ್ತು ಅನಾಥಾಲಯಗಳನ್ನು ಪ್ರತಿ ತಿಂಗಳು ತಪಾಸಿಸುವಂತೆ ಮುಖ್ಯಮಂತ್ರಿ ಕಳೆದ ತಿಂಗಳು ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News