ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡ ಪ್ರಧಾನಿ ನರೇಂದ್ರ ಮೋದಿ !

Update: 2018-09-15 12:11 GMT

ಹೊಸದಿಲ್ಲಿ, ಸೆ. 15: ಪ್ರಧಾನಿಯೇ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡರೆ ಹೇಗೆ ? ಹೀಗೂ ಉಂಟೆ ? ಹೌದು ಬಹಳ ಅಪರೂಪಕ್ಕೆ ಹೀಗೂ ಆಗುತ್ತದೆ.

ಶನಿವಾರ  'ಸ್ವಚ್ಛತಾ ಹೀ ಸೇವಾ' ಅಭಿಯಾನ ಉದ್ಘಾಟಿಸಿದ ಬಳಿಕ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಲು ತೆರಳುವಾಗ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದರು. ಆದರೆ ಇದಕ್ಕೆ ಕಾರಣ ಯಾವುದೇ ಬೇರೆ ವಾಹನ ಅಥವಾ ಪೊಲೀಸರ ವೈಫಲ್ಯ ಅಲ್ಲ. ಖುದ್ದು ಪ್ರಧಾನಿ ನಿರ್ಧಾರದಿಂದಾಗಿಯೇ ಅವರು ದೆಹಲಿಯ ಟ್ರಾಫಿಕ್ ಬವಣೆ ಅನುಭವಿಸುವಂತಾಯಿತು.

ಸಾಮಾನ್ಯವಾಗಿ ಪ್ರಧಾನಿ ಪ್ರಯಾಣಿಸುವಾಗ ಆ ದಾರಿಯಲ್ಲಿ ಯಾವುದೇ ವಾಹನ ಬಾರದಂತೆ ಉದ್ದಕ್ಕೂ ವಾಹನಗಳಿಗೆ ನಿರ್ಬಂಧ ವಿಧಿಸಿ ಪೊಲೀಸರು ಕಾಯುತ್ತಿರುತ್ತಾರೆ. ಅಂದರೆ ಝೀರೋ ಟ್ರಾಫಿಕ್ ನಲ್ಲಿ ಪ್ರಧಾನಿ ಪ್ರಯಾಣಿಸುತ್ತಾರೆ. ಆದರೆ ಮೋದಿಯವರಿಗೆ ಏನನ್ನಿಸಿತೋ ಏನೋ, ಶನಿವಾರ ಇದ್ದಕ್ಕಿದ್ದಂತೆ ಯಾವುದೇ ವಿಶೇಷ ವ್ಯವಸ್ಥೆ ಮಾಡದ ದಾರಿಯಲ್ಲಿ ತಾವು ತಲುಪಬೇಕಿರುವ ಪಹಾರ್ ಗಂಜ್ ನ ಬಾಬಾ ಸಾಹೇಬ್ ಅಂಬೇಡ್ಕರ್ ಶಾಲೆಗೆ ಹಠಾತ್ತನೆ ಹೊರಟು ಬಿಟ್ಟರು. ಟ್ರಾಫಿಕ್ ಸಿಗ್ನಲ್ ಗಳಲ್ಲಿ ಸಾಮಾನ್ಯರಂತೆ ಪ್ರಧಾನಿಯ ಕಾರು ಕೂಡ ನಿಂತಿತು.  ಆದರೆ ದೆಹಲಿಯ ಭಯಂಕರ ಟ್ರಾಫಿಕ್ ಎದುರು ಯಾರಾದರೇನು ? ಹೊರಟ ಸ್ವಲ್ಪ ಹೊತ್ತಿನಲ್ಲೇ ಪ್ರಧಾನಿಯವರ ವಾಹನಗಳ ಸಾಲು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡವು. 

ಬಿಜೆಪಿ ಪ್ರಧಾನಿ ವಾಹನ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿರುವ ವೀಡಿಯೊ ಟ್ವಿಟ್ಟರ್ ನಲ್ಲಿ ಹಾಕಿ ಪ್ರಧಾನಿ ಜನಸಾಮಾನ್ಯರಂತೆ ಪ್ರಯಾಣಿಸಿದರು ಎಂದು ಬಣ್ಣಿಸಿತು. ಟ್ವಿಟಿಗರು ಪ್ರಧಾನಿಯ ಈ ಕ್ರಮವನ್ನು ಶ್ಲಾಘಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News