ಚಂಡಮಾರುತದ ದಾಂಧಲೆಗೆ ಕನಿಷ್ಠ 11 ಬಲಿ: ದುರಂತ ಪ್ರದೇಶವೆಂದು ಟ್ರಂಪ್ ಘೋಷಣೆ

Update: 2018-09-16 17:55 GMT

 ವಾಶಿಂಗ್ಟನ್,ಸೆ.16: ಫ್ಲಾರೆನ್ಸ್ ಚಂಡಮಾರುತದ ದಾಂಧಲೆಗೆ ತತ್ತರಿಸಿರುವ ಉತ್ತರ ಕರೋಲಿನ ರಾಜ್ಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದುರಂತಪೀಡಿತ ಪ್ರದೇಶವೆಂದು ಘೋಷಿಸಿದ್ದಾರೆ. ಶುಕ್ರವಾರದಿಂದ ಉತ್ತರ ಕರೋಲಿನ ರಾಜ್ಯದ ವಿವಿಧೆಡೆ ಅಪ್ಪಳಿಸುತ್ತಿರುವ ಫ್ಲಾರೆನ್ಸ್ ಚಂಡಮಾರುತದ ಹಾವಲಿಗೆ ಈತನಕ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.

ಫ್ಲಾರೆನ್ಸ್ ಚಂಡಮಾರುತದೊಂದಿಗೆ ಧಾವಿಸಿ ಬರುತ್ತಿರುವ ಬಿರುಗಾಳಿಯ ವೇಗವು ಶನಿವಾರ ತಾಸಿಗೆ 45 ಮೈಲು ವೇಗಕ್ಕೆ ತಗ್ಗಿದೆ. ಆದರೆ ರಾಜ್ಯವು ದಿಢೀರ್ ಪ್ರವಾಹದ ಭೀತಿಯಿಂದ ಇನ್ನೂ ಮುಕ್ತವಾಗಿಲ್ಲವೆಂದು ಅಮೆರಿಕದ ಹವಾಮಾನ ಇಲಾಖೆ ತಿಳಿಸಿದೆ.

 ಉತ್ತರ ಕರೋಲಿನದ ವಿವಿಧ ನಗರಗಳಲ್ಲಿ ಇಂದು ಕೂಡಾ 60 ಸೆಂ.ಮೀ.ನಷ್ಟು ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ನೆರೆನೀರಿನಲ್ಲಿ ಮುಳುಗಡೆಗೊಂಡಿವೆ. ಮುಂದಿನ ಕೆಲವು ತಾಸುಗಳಲ್ಲಿ ಕೆಲವೆಡೆ 1 ಮೀಟರ್‌ಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆಯೆದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

 ಕರೋಲಿನಾದ ವಿವಿಧ ನಗರಗಳಲ್ಲಿ 10 ಲಕ್ಷಕ್ಕೂ ಅಧಿಕ ಮನೆಗಳಲ್ಲಿ, ಕಳೆದ ಶುಕ್ರವಾರದಿಂದ ವಿದ್ಯುತ್ ಸಂಪರ್ಕ ಕಡಿದುಹೋಗಿದೆಯೆಂದು ಮೂಗಳು ತಿಳಿಸಿವೆ.

ಉತ್ತರ ಕರೋಲಿನಾ ರಾಜ್ಯದ ಎಂಟು ಜಿಲ್ಲೆಗಳು ದುರಂತ ಪೀಡಿತವೆಂದು ಟ್ರಂಪ್ ಘೋಷಿಸಿರುವುದರಿಂದ ಆ ಪ್ರದೇಶಗಳ ಪರಿಹಾರ ಕಾರ್ಯ ಹಾಗೂ ಸಂತ್ರಸ್ತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲು ಅಮೆರಿಕದ ಫೆಡರಲ್ ನಿಧಿಯಿಂದ ಹಣ ಬಿಡುಗಡೆ ಮಾಡಲು ಸಾಧ್ಯವಾಗಲಿದೆ.

ಫ್ಲಾರೆನ್ಸ್ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ 9700ಕ್ಕೂ ಅಧಿಕ ರಾಷ್ಟ್ರೀಯ ರಕ್ಷಣಾ ದಳದ ಯೋಧರು ಹಾಗೂ ನಾಗರಿಕ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಹೆಲಿಕಾಪ್ಟರ್, ದೋಣಿ ಇತ್ಯಾದಿಗಳೊಂದಿಗೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕ್ಯಾರೊಲಿನಾದ್ಯಂತ ರವಿವಾರವಿಡೀ ಭಾರೀ ಮಳೆ ಹಾಗೂ ನೆರೆ ಪರಿಸ್ಥಿತಿ ಮುಂದುವರಿಯಲಿದೆಯೆಂದು ರಾಷ್ಟೀಯ ಚಂಡಮಾರುತ ಕೇಂದ್ರ ತಿಳಿಸಿದೆ. ಆದರೆ ಸೋಮವಾರದೊಳಗೆ ಫ್ಲಾರೆನ್ಸ್ ಚಂಡಮಾರುತವು ಒಹಿಯೊ ಕಣಿವೆ ಪ್ರದೇಶವಾಗಿ ಉತ್ತರಾಭಿಮುಖವಾಗಿ ಚಲಿಸುವ ನಿರೀಕ್ಷೆಯಿದೆಯೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News