ಮದ್ಯ ನೀಡದ ನೆಪ: ಪಬ್‌ನಲ್ಲಿ ಸರ್ಕಾರಿ ವೈದ್ಯರ ದಾಂಧಲೆ

Update: 2018-09-17 04:12 GMT

ಆಗ್ರಾ, ಸೆ.17: ಪಬ್ ಮುಚ್ಚುವ ಗಂಟೆ ಮೀರಿದ ಬಳಿಕ ಮದ್ಯ ನೀಡಲು ನಿರಾಕರಿಸಿದ ಸ್ಥಳೀಯ ಪಬ್‌ನಲ್ಲಿ ದಾಂಧಲೆ ನಡೆಸಿದ ಪ್ರತಿಷ್ಠಿತ ಎಸ್.ಎನ್. ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಅಶೋಕ ಪಬ್ ಮತ್ತು ರೆಸ್ಟೋರೆಂಟ್‌ನಲ್ಲಿ ದಾಂಧಲೆ ಎಬ್ಬಿಸಿದ ವೈದ್ಯ, ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೇ, ಪೊಲೀಸರನ್ನು ಥಳಿಸಿ ಅವರ ಸಮವಸ್ತ್ರವನ್ನು ಹರಿದು ಹಾಕಿದ್ದಾನೆ.

ಶನಿವಾರ ತಡರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ 15 ಕಿರಿಯ ವೈದ್ಯರು ಜೈಲಿನಲ್ಲಿದ್ದು, 10 ಮಂದಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 40 ಮಂದಿ ಗುರುತು ಪತ್ತೆಯಾಗದ ವೈದ್ಯಕೀಯ ಸಿಬ್ಬಂದಿಯ ಮೇಲೂ ಪಬ್ ಧ್ವಂಸಗೊಳಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ ಅಮಿತ್ ಪಾಠಕ್ ಹೇಳಿದ್ದಾರೆ.

ವೈದ್ಯರ ಬಂಧನ ಖಂಡಿಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ರವಿವಾರ ದಿಢೀರ್ ಪ್ರತಿಭಟನೆ ನಡೆಸಿದ್ದರಿಂದ ತುರ್ತು ನಿಗಾ ವಿಭಾಗ ಕೂಡಾ ಕಾರ್ಯನಿರ್ವಹಿಸಲಿಲ್ಲ. ಬಳಿಕ ಹಿರಿಯ ಆಡಳಿತಾಧಿಕಾರಿಗಳು ಕಾಲೇಜಿನ ಪ್ರಾಚಾರ್ಯರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದರು. ಆ ಬಳಿಕ ಮುಷ್ಕರ ವಾಪಸ್ ಪಡೆಯಲಾಯಿತು. ಆದಾಗ್ಯೂ ಕಿರಿಯ ವೈದ್ಯರು ಕರ್ತವ್ಯಕ್ಕೆ ಮರಳಿಲ್ಲ.

ಈ ಮೊದಲು ಕೂಡಾ ಕಿರಿಯ ವೈದ್ಯರು ಇಂಥ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದು, ಪ್ರಾಚಾರ್ಯರನ್ನು ಭೇಟಿ ಮಾಡಿ ಇವರ ವಿರುದ್ಧ ಆಂತರಿಕವಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಇಂಥ ದುರ್ನಡತೆ ಹಿನ್ನೆಲೆಯಲ್ಲೂ ಯಾರು ಇವರನ್ನು ರಕ್ಷಿಸುತ್ತಿದ್ದಾರೆ ಎಂದು ಅಮಿತ್ ಪಾಠಕ್ ಪ್ರಶ್ನಿಸಿದ್ದಾರೆ.

ಪಬ್‌ನ ವ್ಯವಸ್ಥಾಪಕ ಶಿವಾಜಿ ಓಜಾ ನೀಡಿದ ಲಿಖಿತ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ತಮ್ಮ ಸಹೋದ್ಯೋಗಿಯೊಬ್ಬರ ಹುಟ್ಟುಹಬ್ಬ ಆಚರಣೆಗಾಗಿ ಪಬ್‌ಗೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News