ಸಲಿಂಗಿಗಳು ಹಾಗೂ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದ ಮಹಿಳಾ ಅಧಿಕಾರಿಯನ್ನು ಕೆಲಸದಿಂದ ಕಿತ್ತು ಹಾಕಿದ ಟೆಕ್ ಮಹೀಂದ್ರ

Update: 2018-09-17 06:15 GMT

ಹೊಸದಿಲ್ಲಿ,ಸೆ.17 : ತನ್ನ ಮಾಜಿ ಉದ್ಯೋಗಿಯೊಬ್ಬ ಸಲಿಂಗಿಯೆಂಬ ಕಾರಣಕ್ಕೆ ಆತನಿಗೆ ಕಿರುಕುಳ ನೀಡಿದ್ದೇ ಅಲ್ಲದೆ ಇಸ್ಲಾಂ ಧರ್ಮವನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ಮಹಿಳಾ ಅಧಿಕಾರಿಯೊಬ್ಬರನ್ನು (ಡೈವರ್ಸಿಟಿ ಆಫೀಸರ್) ಟೆಕ್ ಮಹೀಂದ್ರಾ ಕಂಪೆನಿ ಆಂತರಿಕ ತನಿಖೆಯ ನಂತರ ಕೆಲಸದಿಂದ ಉಚ್ಛಾಟಿಸಿದೆ.

ಕಂಪೆನಿಯ ಮಾಜಿ ಉದ್ಯೋಗಿ ಗೌರವ್ ಪ್ರೊಬಿರ್ ಪ್ರಮಾಣಿಕ್ ಎಂಬಾತ ತನಗಾದ ಕಿರುಕುಳದ ಬಗ್ಗೆ ಟ್ವೀಟ್ ಮಾಡಿದ ನಂತರ ಕಂಪೆನಿ ಆಂತರಿಕ ತನಿಖೆ ನಡೆಸಿತ್ತು. ಕಂಪೆನಿಯ ನೊಯ್ಡಾ ಕಚೇರಿಯಲ್ಲಿ ಗೌರವ್ 2013-2016 ನಡುವೆ ಉದ್ಯೋಗದಲ್ಲಿದ್ದ.

ಇದೀಗ ಕೆಲಸದಿಂದ ಉಚ್ಛಾಟಿಸಲ್ಪಟ್ಟ ಅಧಿಕಾರಿ ರಿಚಾ ಶರ್ಮ ತನ್ನನ್ನು ನಪುಂಸಕನೆಂದು ಜರಿದಿದ್ದು ಇದರಿಂದ ತನ್ನ ಕಾರ್ಯನಿರ್ವಹಣೆಯ ಮೇಲೆ ಅದು ಪರಿಣಾಮ ಬೀರಿದೆ ಎಂದು ಗೌರವ್ ಆರೋಪಿಸಿದ್ದರು.

2015ರಲ್ಲಿ ಒಮ್ಮೆ ಅಳುತ್ತಿದ್ದ ಮ್ಯಾನೇಜರ್ ಒಬ್ಬರನ್ನುದ್ದೇಶಿಸಿ ನೀವೇನು ಈ ರೀತಿ ಅಳಲು ಸಲಿಂಗಿಯೇ ಎಂದು ಆಕೆ ಕೇಳಿದ್ದರೆಂದೂ ಗೌರವ್ ಆರೋಪಿಸಿದ್ದರು.

ವಿವಾದವೆದ್ದಂದಿನಿಂದ ಲಾಕ್ ಮಾಡಲ್ಪಟ್ಟಿರುವ ಟ್ವಿಟ್ಟರ್ ಖಾತೆಯಲ್ಲಿ ಆಕೆ ಇಸ್ಲಾಂ ಧರ್ಮವನ್ನು ಜಾಗತಿಕ ಸಂಕಷ್ಟ (ಗ್ಲೋಬಲ್ ಪೇನ್) ಎಂದೂ ಬಣ್ಣಿಸಿದ್ದಳೆನ್ನಲಾಗಿದೆ.

ತನ್ನ ದೂರಿನ ಆಧಾರದಲ್ಲಿ ಅಧಿಕಾರಿಯನ್ನು ಉಚ್ಛಾಟಿಸಿದ್ದು ತನಗೆ ಖುಷಿ ನೀಡಿದೆ. ಟೆಕ್ ಮಹೀಂದ್ರದಲ್ಲಿನ ಉದ್ಯೋಗವನ್ನು ತೊರೆಯಲು ಅಲ್ಲಿ ತಾನು ಸಲಿಂಗಿಯೆಂಬ ನೆಪದಲ್ಲಿ ಎದುರಿಸಿದ್ದ ಅವಮಾನವೇ  ಕಾರಣ ಎಂದೂ ಗೌರವ್ ಹೇಳಿಕೊಂಡಿದ್ದಾರೆ.

ರಿಚಾ ಶರ್ಮ ಎಂಬ ಅಧಿಕಾರಿಯನ್ನು ಕೆಲಸದಿಂದ ಕಿತ್ತು ಹಾಕಿರುವುದನ್ನು ಟೆಕ್ ಮಹೀಂದ್ರ ಎಂಡಿ ಹಾಗೂ ಸಿಇಒ ಸಿ ಪಿ ಗುರ್ನಾನಿ ದೃಢೀಕರಿಸಿದ್ದಾರೆ. ರಿಚಾ ಶರ್ಮ ಕಂಪೆನಿಯಲ್ಲಿ 2007ರಿಂದ ಉದ್ಯೋಗದಲ್ಲಿದ್ದರು.

ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿಗಿನ ತೀರ್ಪಿನಲ್ಲಿ ಹೇಳಿದ ನಂತರ ಈ ಕಿರುಕುಳ ಪ್ರಕರಣ ಬೆಳಕಿಗೆ ಬಂದಿತ್ತು. ಆರಂಭದಲ್ಲಿ ರಿಚಾಗೆ ಇಮೇಲ್ ಬರೆದಿದ್ದ ಗೌರವ್ ಅದಕ್ಕೆ ಉತ್ತರ ದೊರೆಯದೇ ಇದ್ದಾಗ  ಈ ಬಗ್ಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಹಾಗೂ ಟೆಕ್ ಮಹೀಂದ್ರಾ ಎಂಡಿ ಗುರ್ನಾನಿ ತನಿಖೆ ನಡೆಸುವ ಆಶ್ವಾಸನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News