ಐವರು ಹೋರಾಟಗಾರರ ಬಂಧನ: ಸುಪ್ರೀಂ ‘ಮಧ್ಯಪ್ರವೇಶ’ ಆಕ್ಷೇಪಿಸಿದ ಕೇಂದ್ರ ಸರಕಾರ

Update: 2018-09-17 07:44 GMT

ಹೊಸದಿಲ್ಲಿ, ಸೆ.17: ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪದಲ್ಲಿ  ಗೃಹಬಂಧನದಲ್ಲಿರುವ ಐವರು ಮಾನವ ಹಕ್ಕು ಹೋರಾಟಗಾರರ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟಿನ ಮಧ್ಯಪ್ರವೇಶವನ್ನು ಕೇಂದ್ರ ಸರಕಾರ ಆಕ್ಷೇಪಿಸಿದೆ.

ಐವರು ಹೋರಾಟಗಾರರು ಗೃಹಬಂಧನದಿಂದ ಮುಕ್ತಿಗೊಳಿಸುವಂತೆ ಸಲ್ಲಿಸಿರುವ ಅರ್ಜಿಯನ್ನು ಉಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

‘‘ಪ್ರತಿಯೊಂದು ಪ್ರಕರಣಗಳು ಸುಪ್ರೀಂಕೋರ್ಟ್‌ಗೆ ಬರಲು ಸಾಧ್ಯವಿಲ್ಲ. ಇದೊಂದು ತಪ್ಪು ಪ್ರಕ್ರಿಯೆ. ನಂತರ ಪ್ರತಿ ಪ್ರಕರಣವೂ ಸುಪ್ರೀಂಕೋರ್ಟಿಗೆ ಬರಲು ಬಯಸುತ್ತದೆ’’ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟಿನಲ್ಲಿ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್,‘‘ಮಾವೋವಾದಿಗಳ ಉಪಟಳ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸಾಮಾಜಿಕ ವಿರೋಧಿ ಚಟುವಟಿಕೆ ಭೀತಿ ಹೆಚ್ಚಾಗಲು ಆರೋಪಿ ಸ್ಥಾನದಲ್ಲಿರುವ ಹೋರಾಟಗಾರರೇ ಹೊಣೆ. ಬಂಧನ ಪ್ರಶ್ನಿಸಿರುವ ಅರ್ಜಿದಾರರಿಗೆ ಕೆಳ ನ್ಯಾಯಾಲಯ, ಹೈಕೋರ್ಟ್ ಅಥವಾ ಇತರ ಕಾನೂನು ಆಯ್ಕೆಗಳಿದ್ದರೂ ಸುಪ್ರೀಕೋರ್ಟ್‌ಗೆ ಯಾಕೆ ಬಂದಿದ್ದಾರೆ’’ ಎಂದು ಸಿಂಗ್ ಪ್ರಶ್ನಿಸಿದರು.

 ಇತಿಹಾಸತಜ್ಞೆ ರೊಮಿಲಾ ಥಾಪರ್ ಹಾಗೂ ಇತರ ನಾಲ್ವರು ಕಳೆದ ತಿಂಗಳು ಐವರು ಹೋರಾಟಗಾರರ ಬಂಧನವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಪುಣೆ ಪೊಲೀಸರು ಐವರು ಹೋರಾಟಗಾರರನ್ನು ಬಂಧಿಸಲು ಮುಂದಾಗಿದ್ದನ್ನು ಖಂಡಿಸಿ ಮಾನವಹಕ್ಕು ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದ್ದರು.

ಸುಪ್ರೀಂಕೋರ್ಟ್ ಸೆ.12ರ ತನ್ನ ತೀರ್ಪಿನಲ್ಲಿ ಹೋರಾಟಗಾರರ ಗೃಹಬಂಧನವನ್ನು ಸೆ.17ರ ತನಕ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News